ಬೆಂಗಳೂರು : ಕೋಟ್ಯಾಂತರ ರೂಪಾಯಿ ವಂಚನೆ ಮಾಡಿ ಐಎಂಎ ಜ್ಯುವೆಲರ್ಸ್ ಮಾಲೀಕ ಮೊಹ್ಮಮದ್ ಮನ್ಸೂರ್ ಖಾನ್ ನಾಪತ್ತೆ ಆಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಇದರಿಂದಾಗಿ ಹೂಡಿಕೆ ಮಾಡಿದ್ದ ನೂರಾರು ಜನ ಹೂಡಿಕೆದಾರರು ಕಂಗಲಾಗಿದ್ದು, ಅಂಗಡಿ ಮುಂದೆ ಜಮಾವಣೆ ಆಗಿದ್ದು, ಪೊಲೀಸರಿಗೆ ತಮ್ಮ ಹೂಡಿಕೆ ಹಣವನ್ನು ವಾಪಾಸ್ಸು ಕೊಡಿಸುವಂತೆ ಲಿಖಿತ ದೂರು ನೀಡುತ್ತಿದ್ದಾರೆ.
ಸಾವಿರಾರು ಜನರು ಐಎಂಎ ಜುವ್ಯಲರ್ಸ್ ನಲ್ಲಿ ಲಕ್ಷ ಲಕ್ಷ ಹಣ ಹೂಡಿಕೆ ಮಾಡಿದ್ದರು. ಅದರಿಂದ ಸಂಗ್ರಹವಾಗಿದ್ದ ಕೋಟ್ಯಾಂತರ ರೂಪಾಯಿಯನ್ನು ರಾಜಕಾರಣಿಯೊಬ್ಬರು ಪಡೆದಿದ್ದರು ಎನ್ನಲಾಗಿದೆ.
ಈ ಬಗ್ಗೆ ಐಎಂಎ ಜುವ್ಯೆಲರ್ಸ್ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್ ತನ್ನ ಅಳಲು ತೊಡಿಕೊಂಡಿದ್ದು, ಶಿವಾಜಿ ನಗರ ಶಾಸಕರು ನನ್ನ ಬಳಿ 400 ಕೋಟಿ ಪಡೆದು ಹಿಂತಿರುಗಿಸದೆ ಕೈ ಕೊಟ್ಟಿದ್ದಾರೆ. ಹಣ ಮರಳಿ ಕೇಳಿದರೆ ರೌಡಿಗಳನ್ನು ಆಫೀಸ್ ಹಾಗೂ ಮನೆಗೆ ಕಳುಹಿಸುತ್ತಿದ್ದರು.
ಇದರಿಂದಾಗಿ ನನಗೆ ತುಂಬಾ ಹಿಂಸೆ ಆಗುತ್ತಿತ್ತು. ಹೀಗಾಗಿ ನಾನು ಈ ಧ್ವನಿ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಹೇಳುತ್ತಿದ್ದೇನೆ. ಈ ಆಡಿಯೋ ನಿಮಗೆ ತಲುಪವರೆಗೆ ನಾನು ಈ ದುನಿಯಾದಲ್ಲಿ ಇರಲ್ಲ ಎಂದು ಹೇಳಿರುವುದು ಹಲವರ ಆತಂಕಕ್ಕೆ ಕಾರಣವಾಗಿದೆ.
ಅವರ ನಾಪತ್ತೆಯಿಂದ ನೂರಾರು ಜನ ಆತಂಕಗೊಂಡಿದ್ದು, ಅವರ ಅಂಗಡಿ ಎದುರು ಜಮಾಯಿಸಿದ್ದು ಮನ್ಸೂರ್ ಖಾನ್ ಓಡಿ ಹೋದ ವಿಷಯ ತಿಳಿದು ಕಣ್ಣೀರು ಹಾಕುತ್ತಿದ್ದಾರೆ.
ಮಳಿಗೆ ಬಳಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದು, ಹೂಡಿಕೆದಾರರಿಂದ ದೂರು ಪಡೆಯುತ್ತಿದ್ದಾರೆ. ಸಾವಿರಕ್ಕೂ ಹೆಚ್ಚು ಮಂದಿಯಿಂದ ಹಣ ಹೂಡಿಕೆಯಾಗಿರುವ ಸಾಧ್ಯತೆಗಳಿವೆ.
ಸದ್ಯ ಮನ್ಸೂರ್ ಖಾನ್ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಸ್ಥಳಕ್ಕೆ ಪೂರ್ವ ವಿಭಾಗದ ಡಿಸಿಪಿ ರಾಹುಲ್ ಕುಮಾರ ಆಗಮಿಸಿದ್ದು, ಪೊಲೀಸರ ಶೋಧ ಕಾರ್ಯ ಮುಂದುವರೆದಿದ್ದು, ಬೆಂಗಳೂರಿನಿಂದ ದೇಶ ಬಿಟ್ಟು ಓಡಿ ಹೋಗಿರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಈ ಕುರಿತು ಬೆಂಗಳೂರು ಪೊಲೀಸರು ಲುಕ್ ಔಟ್ ನೋಟಿಸ್ ಹೊರಡಿಸಲಾಗಿದೆ. ಏರ್ ಪೋರ್ಟ್, ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣದಲ್ಲಿ ಅಂಟಿಸಲಾಗಿದೆ.