ಒಬ್ಬ ವ್ಯಕ್ತಿ ಅಲ್ಲಾಹನ ಮೆಚ್ಚುಗೆ ಮತ್ತು ಸಂಪ್ರೀತಿಯನ್ನು ಸಂಪಾದಿಸುವುದರ ಜೊತೆಗೆ ಜನರ ಪ್ರೀತಿಗೂ ಪಾತ್ರನಾಗಿರುವುದೆಂದರೆ ಅವರೊಬ್ಬ ಅತ್ಯುತ್ತಮ ಮನುಷ್ಯನೆಂದೆ ಅರ್ಥ.
ಪ್ರವಾದಿ ಮುಹಮ್ಮದ್ (ಸ) ಅವರು ಅಲ್ಲಾಹನ ಸಂಪ್ರೀತಿಯನ್ನು ಜನರ ಆದರವನ್ನು ಗಳಿಸಿ ಕೊಡಲು ಸೇತುವೆಯಾಗುವುದೆಂದು ಕಲಿಸಿ ಕೊಟ್ಟಿರುವ ಕರ್ಮವು ಬಹಳ ಅರ್ಥ ಗರ್ಭೀತವಾಗಿದೆ.
ಮನುಷ್ಯನ ಮನಃಶಾಸ್ತ್ರಕ್ಕೆ ಸಂಬಂಧಿಸಿದ ಕೆಲವು ಆಳವಾದ ವಾಸ್ತವಿಕತೆಗಳು ಇದರಲ್ಲಿ ಅಡಕವಾಗಿವೆ. ಒಬ್ಬ ವ್ಯಕ್ತಿ ಲೌಕಿಕ ಒಲವುಗಳನ್ನು ತೊರೆದು ಬಿಟ್ಟೊಡನೆ ಅವನು ಸಂಪೂರ್ಣವಾಗಿ ದೇವನ ಬಗ್ಗೆ ಒಲವು ಬೆಳೆಸಿಕೊಳ್ಳುತ್ತಾನೆ.
ಅವನ ಆಸಕ್ತಿಗಳೆಲ್ಲವೂ ಅಲ್ಲಾಹ ಮೇಲೆಯೇ ಕೇಂದ್ರಿಕೃತವಾಗಿ ಬಿಡುತ್ತವೆ. ಆಗ ಅವನಲ್ಲಿ ಬೆಳೆಯುವ ದೇವಪ್ರೇಮ ಮತ್ತು ಪರ ಲೋಕದ ಒಲವು, ಅವನ ಬದುಕನ್ನು ಅಕ್ಷರಶಃ ಒಳಿತನ ಬದುಕಾಗಿ ಅವನು ಪ್ರೀತಿಸುವ ವಿಧಾನದಂತೆ ಪರಿಪೂರ್ಣವಾಗಿ ತಿದ್ದಿಕೊಳ್ಳುವನು.
ಸ್ವಾಭಾವಿಕವಾಗಿಯೇ ಅಲ್ಹಾಹನ ಪ್ರೀತಿಗೆ ಪಾತ್ರನಾಗುತ್ತಾನೆ. ಒಬ್ಬನು ಅಲ್ಲಾಹನಿಗಾಗಿ ಮಾರ್ಪಟ್ಟರೆ, ಅಲ್ಲಾಹನು ಕೂಡ ಅವನಿಗಾಗಿ ಮಾರ್ಪಡುತ್ತಾನೆ.
ಹಾಗೆಯೇ ಮನುಷ್ಯನು ಇತರ ಮನುಷ್ಯರ ಬಳಿಯಿರುವ ಸಂಪತ್ ಸೌಕರ್ಯಗಳ ಬಗ್ಗೆ ನಿರ್ಲಿಪ್ತನಾಗಿ ಬಿಟ್ಟಾಗ ಮತ್ತು ಇತರರ ಬಳಿಯಿರುವ ಯಾವುದೇ ವಸ್ತುವಿನ ಕುರಿತು ಅವನಿಗೆ ಯಾವುದೇ ಆಸೆಯಾಗಲಿ, ಲೋಭವಾಗಲಿ, ಅಸೂಯೆಯಾಗಲಿ, ಇಲ್ಲದೆ, ಹೋದಾಗ ಅವನ ಬಗ್ಗೆ ಜನರಲ್ಲಿ ಗೌರವಭಾವ ಮೂಡುತ್ತದೆ.
ಜನರು ಅವನನ್ನು ಗೌರವದಿಂದ ಕಾಣಲು ನಿರ್ಭಧೀತರಾಗುತ್ತಾರೆ. ಇಂತಹ ವ್ಯಕ್ತಿ ಜನರಿಂದ ಸಂಪರ್ಕ ಕಡಿದುಕೊಂಡಿರುವುದಿಲ್ಲ. ಅವನಿಗೆ ಸಾಕಷ್ಟು ಜನ ಸಂಪರ್ಕವಿರುತ್ತದೆ. ಆದರೆ ಆ ಸಂಪರ್ಕಗಳೆಲ್ಲಾ ಅತ್ಯಂತ ನಿಸ್ವಾರ್ಥವಾಗಿರುತ್ತವೆ. ಜನರ ಸೇವೆ ತನ್ನ ಕರ್ತವ್ಯವೆಂದು ಅವನು ಭಾವಿಸಿಕೊಂಡಿರುತ್ತಾನೆ. ಅವನು ಯಾರಿಂದಲೂ ತನ್ನ ಹಿತಕ್ಕಾಗಿ ಏನನ್ನೂ ನಿರೀಕ್ಷಿಸುವುದಿಲ್ಲ.
ಅವನು ಜನರನ್ನು ಅವರ ಹಿತಕ್ಕಾಗಿಯೇ ಭೇಟಿಯಾಗುತ್ತಾನೆ. ಅವರಿಂದೇನಾದರೂ ಪಡೆಯುವ ಬದಲು ತನಗೆ ಸಾಧ್ಯವಾದಷ್ಟು ಅವರಿಗೆ ಕೊಡಲು ಅವನು ಪ್ರಯತ್ನಿಸುತ್ತಾನೆ.
ಇಂತಹ ವ್ಯಕ್ತಿ ಜನರ ಪ್ರೀತಿ ಮತ್ತು ಗೌರವಾದರಗಳಿಗೆ ಪಾತ್ರನಾಗುವುದು ಸ್ವಾಭಾವಿಕ. ಅಲ್ಲಾಹ ಕೂಡ ಇಂತಹವರನ್ನೇ ಪ್ರೀತಿಸುತ್ತಾನೆ.
ಇಮ್ರಾನ್ ಕಳ್ಳಿಮನಿ,
ಮುಸ್ಲಿಂ ಸಮಾಜದ ಯುವ ಮುಖಂಡರು, ಧಾರವಾಡ