ಬೆಂಗಳೂರು prajakiran.com : ರಾಜ್ಯಸಭೆ ಟಿಕೇಟ್ ಗಾಗಿ ಲಾಭಿ ಜೋರಾಗಿದ್ದು, ಸಚಿವ ಜಗದೀಶ ಶೆಟ್ಟರ್ ಅವರನ್ನು ಕತ್ತಿ ಸಹೋದರರು ಶುಕ್ರವಾರ ಭೇಟಿ ಮಾಡಿ ಮಾತುಕತೆ ನಡೆಸಿರುವುದು ರಾಜ್ಯ ರಾಜಕೀಯದಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದೆ.
ರಾಜ್ಯಸಭೆಗೆ ಅಭ್ಯರ್ಥಿಗಳ ಆಯ್ಕೆ ಹಿನ್ನಲೆಯಲ್ಲಿ ನಾಳೆ ಜೂನ್ 6ರಂದು ಕೋರ್ ಕಮಿಟಿ ಸಭೆ ನಡೆಯಲಿದ್ದು, ಅದರಲ್ಲಿ ತಮ್ಮ ಸಹೋದರ ರಮೇಶ ಕತ್ತಿ ಹೆಸರು ಶಿಫಾರಸ್ಸು ಮಾಡಲು ಮಾಜಿ ಸಚಿವ ಉಮೇಶ ಕತ್ತಿ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ರಾಜ್ಯಸಭಾ ಟಿಕೇಟ್ ಗಿಟ್ಟಿಸಲು ಉಮೇಶ ಕತ್ತಿ ಹಾಗೂ ರಮೇಶ ಕತ್ತಿ ಅವರು ಶೆಟ್ಟರ್ ಮನವೊಲಿಸಿದ್ದಾರೆ ಎನ್ನಲಾಗುತ್ತಿದೆ. ನಾಳೆ ಕೋರ್ ಕಮಿಟಿ ಸಭೆಯಲ್ಲಿ ರಾಜ್ಯಸಭಾ ಸದಸ್ಯತ್ವಕ್ಕೆ ಆಯ್ಕೆ ಅಂತಿಮಗೊಳ್ಳಲಿದ್ದು, ಪ್ರಭಾಕರ ಕೊರೆ ಹಾಗೂ ರಮೇಶ ಕತ್ತಿ ನಡುವೆ ಪೈಪೋಟಿ ಶುರುವಾಗಿದೆ.
ಈ ಹಿನ್ನಲೆಯಲ್ಲಿ ಕೋರ್ ಕಮಿಟಿ ಸದಸ್ಯರಾಗಿರುವ ಸಚಿವ ಜಗದೀಶ ಶೆಟ್ಟರ ಅವರ ಭೇಟಿ ಅಚ್ಚರಿ ಮೂಡಿಸಿದೆ. ಇಬ್ಬರು ನಾಯಕರು ಪರಸ್ಪರ ಹದಿನೈದು ನಿಮಿಷಗಳ ಕಾಲ ಮಾತುಕತೆ ನಡೆಸಿದರು ಎಂದು ಹೇಳಲಾಗುತ್ತಿದೆ.
ಹೀಗಾಗಿ ನಾಳೆ ಕೋರ್ ಕಮಿಟಿ ಸಭೆಯಲ್ಲಿ ಯಾರ ಹೆಸರು ಅಂತಿಮಗೊಳಿಸುತ್ತಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ಆ ಹೆಸರನ್ನೇ ರಾಜ್ಯ ಬಿಜೆಪಿ ಕೋರ್ ಕಮಿಟಿ ಹೈಕಮಾಂಡ್ ಗೆ ಕಳುಹಿಸಿ ಕೊಡಲಿದೆ ಎನ್ನಲಾಗುತ್ತಿದೆ. ಈ ಹಿನ್ನಲೆಯಲ್ಲಿ ಶೆಟ್ಟರ್ ಹಾಗೂ ಕತ್ತಿ ಸಹೋದರರ ಸಭೆ ಭಾರೀ ಮಹತ್ವ ಪಡೆದಿದ್ದು, ರಮೇಶ ಕತ್ತಿನಾ ಅಥವಾ ಪ್ರಭಾಕರ ಕೊರೆ ಹೆಸರು ಅಂತಿಮಗೊಳಿಸುತ್ತಾರೆಯೇ ಎಂಬುದು ಕಾದು ನೋಡಬೇಕಿದೆ.
ಈ ಹಿಂದೆ ಉಮೇಶ್ ಕತ್ತಿ ನೇತೃತ್ವದಲ್ಲಿ ನಡೆದ ಬಂಡಾಯ ಶಾಸಕರ ಸಭೆಯಲ್ಲಿ ಸಚಿವ ಜಗದೀಶ ಶೆಟ್ಟರ ಹೆಸರು ಸಿಎಂ ಗಾದಿಗೆ ಕೇಳಿಬಂದಿತ್ತು. ಹೀಗಾಗಿ ಇಬ್ಬರು ನಾಯಕರ ಪರಸ್ಪರ ಭೇಟಿ ಕುತೂಹಲ ಕೆರಳಿಸಿದ್ದು, ಭಾರೀ ಮಹತ್ವ ಪಡೆದುಕೊಂಡಿದೆ.
