ನವದೆಹಲಿ : ರಾಜ್ಯದ 28 ಲೋಕಸಭಾ ಸ್ಥಾನಗಳ ಪೈಕಿ 25 ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿರುವ ಬಿಜೆಪಿ ಸಂಸದರು ಈ ಬಾರಿ ಕೇಂದ್ರ ಸರಕಾರದಲ್ಲಿ ಸಚಿವರಾಗಲು ಉತ್ಸುಕರಾಗಿದ್ದಾರೆ.
ಅದರಲ್ಲೂ ವಿಶೇಷವಾಗಿ ಲಿಂಗಾಯತ ಕೋಟಾದಲ್ಲಿ ಭಾರೀ ಪೈಪೋಟಿ ಆರಂಭವಾಗಿದ್ದು, ತುಮಕೂರಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಮಣಿಸಿದ ಜಿ. ಎಸ್ ಬಸವರಾಜು, ಗದಗ-ಹಾವೇರಿಯಲ್ಲಿ ಹಿರಿಯ ಕಾಂಗ್ರೆಸ್ಸಿಗ ಡಿ.ಆರ್. ಪಾಟೀಲರಿಗೆ ಮಣಿಸಿದ ಶಿವಕುಮಾರ ಉದಾಸಿ, ಬೆಳಗಾವಿಯಲ್ಲಿ ಸತತ ಗೆಲುವು ಬಾರಿಸುತ್ತಿರುವ ಸುರೇಶ್ ಅಂಗಡಿ, ಬಾಗಲಕೋಟೆಯಲ್ಲಿ ಪಿ.ಸಿ. ಗದ್ದಿಗೌಡರ ಕೂಡ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.
ಅದೇ ರೀತಿ ಒಕ್ಕಲಿಗ ಕೋಟಾದಲ್ಲಿ ಈ ಹಿಂದೆ ಸಚಿವರಾಗಿದ್ದ ಡಿ.ವಿ. ಸದಾನಂದಗೌಡ, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ದಲಿತ ಕೋಟಾದಲ್ಲಿ ಕಲಬುರಗಿಯ ಉಮೇಶ್ ಜಾಧವ, ಚಾಮರಾಜನಗರದ ಶ್ರೀನಿವಾಸ ಪ್ರಸಾದ,ವಿಜಯಪುರದ ರಮೇಶ ಜಿಗಜಿಣಗಿ ಕೂಡ ಪೈಪೋಟಿ ನಡೆಸುತ್ತಿದ್ದಾರೆ.
ಇನ್ನೂ ಬ್ರಾಹ್ಮಣ ಕೋಟಾದಲ್ಲಿ ಉತ್ತರ ಕನ್ನಡದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ, ಧಾರವಾಡದ ಪ್ರಲ್ಹಾದ ಜೋಶಿ ಹೆಸರು ಕೇಳಿ ಬಂದಿದೆ. ಇವರಲ್ಲಿ ಯಾರಿಗೆ ಮಣೆ ಹಾಕ್ತಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ಆದರೆ ರಾಜ್ಯ ಬಿಜೆಪಿ ಅಧ್ಯಕ್ಷರೂ ಆಗಿರುವ ಬಿ.ಎಸ್. ಯಡಿಯೂರಪ್ಪ ಅವರು ಯಾರ ಸೂಚಿಸುತ್ತಾರೆಯೇ ಅವರಿಗೆ ಮನ್ನಣೆ ನೀಡಲು ಬಿಜೆಪಿ ವರಿಷ್ಟರು ಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ. ದಕ್ಷಿಣ ಭಾರತದಲ್ಲಿಯೇ ಹೆಚ್ಚು ಸ್ಥಾನ ಗಳಿಸಿದ ಕರ್ನಾಟಕಕ್ಕೆ ಸಚಿವ ಸ್ಥಾನದಲ್ಲಿ ಆದ್ಯತೆ ನೀಡಲು ಬಿಜೆಪಿ ನಿರ್ಧರಿಸಿದೆ.
ಬಿಜೆಪಿ ಸರಕಾರದಲ್ಲಿ ಕಳೆದ ಬಾರಿ ಅನಂತಕುಮಾರ, ಸದಾನಂದ ಗೌಡ, ರಮೇಶ ಜಿಗಜಿಣಗಿ, ಅನಂತಕುಮಾರ ಹೆಗಡೆ ಸಚಿವರಾಗಿದ್ದರು, ಈ ಬಾರಿ ಲಿಂಗಾಯತರಿಗೆ ಸಚಿವ ಸ್ಥಾನ ನೀಡಲು ಬಿಜೆಪಿ ನಿರ್ಧರಿಸಿದೆ. ಒಕ್ಕಲಿಗರ ಪೈಕಿ ಶೋಭಾ ಕರಂದ್ಲಾಜೆ, ಯುವಕರ ಕೋಟಾದಲ್ಲಿ ಮೈಸೂರಿನ ಪ್ರತಾಪ ಸಿಂಹ, ದಲಿತ ಕೋಟಾದಲ್ಲಿ ಉಮೇಶ್ ಜಾಧವ್ ಅವರಿಗೆ ಸ್ಥಾನ ಸಿಗುವ ಸಾಧ್ಯತೆಯುದೆ ಅದೇ ರೀತಿ ಶ್ರೀನಿವಾಸ ಪ್ರಸಾದ ಕೂಡ ಈ ಹಿಂದೆ ವಾಜಪೇಯಿ ಸರಕಾರದಲ್ಲಿ ಸಚಿವರಾಗಿದ್ದರು.
ಆದರೆ ಮೋದಿ ಅಮಿತ್ ಶಾ ಅವರ ಸಚಿವ ಸಂಪುಟದಲ್ಲಿ ಆಶ್ಚರ್ಯಕರ ಹೆಸರುಗಳ ಹೊರ ಬಂದರು ಅಚ್ಚರಿಯಿಲ್ಲ. ಯಾರೆಲ್ಲಾ ಸಚಿವ ಸ್ಥಾನಕ್ಕೆ ಏರುತ್ತಾರೆ ಎನ್ನುವುದು ಕಾದು ನೋಡಬೇಕಿದೆ.