ಮಂಡ್ಯ : ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ವಿವಿಧ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟದ ವಿರುದ್ದ ದೂರುಗಳ ಸರಮಾಲೆ ಇದ್ದರೂ ಸ್ಪಂದಿಸದ ಅಬಕಾರಿ ಇನ್ಸ್ಪೆಕ್ಟರ್ ಚಂದ್ರಶೇಖರ್ಗೆ ಕರೆ ಮಾಡಿ ಏಕವಚನದಲ್ಲಿ ನಾಗಮಂಗಲ ಕ್ಷೇತ್ರದ ಶಾಸಕ ಸುರೇಶ್ಗೌಡ ತರಾಟೆ ತೆಗೆದುಕೊಂಡಿದ್ದಾರೆ.
ಪಾಲಗ್ರಹಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರವಾಸಿ ತಾಣ ಕೋಟೆಬೆಟ್ಟದಲ್ಲಿ ಶಾಸಕ ಸುರೇಶಗೌಡ ಅವರ ಜನಸ್ಪಂದನ ಕಾರ್ಯಕ್ರಮದ ವೇಳೆ ಅಕ್ರಮ ಮದ್ಯ ಮಾರಾಟದ ಬಗ್ಗೆ ಮಹಿಳೆಯರಿಂದ ಶಾಸಕರಿಗೆ ದೂರು ಬಂದ ಹಿನ್ನೆಲೆಯಲ್ಲಿ ಶಾಸಕರು ಕೆಂಡಾಮಂಡಲವಾದರು.
ಅಬಕಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆ ಪರಿಹಾರವಾಗಲ್ಲ ಅಂದ್ರೆ ಏನೂ ಅರ್ಥ. ಅಬಕಾರಿಯವರಿಗೆ ಮಾಮೂಲಿ ಹೋಗ್ತಿರಬಹುದು ? ಇಲ್ಲವೇ ಅಬಕಾರಿ ನಿರೀಕ್ಷಕ ಜ್ಞಾನಪ್ರಕಾಶ ಏನು ಕತ್ತೆ ಮೇಯಿಸುತ್ತಿದ್ದಾನ? ಮೊನ್ನೆ 144 ಸೆಕ್ಷನ್ ಜಾರಿ ಇದ್ದರು ಬಾರ್ ಗಳಲ್ಲಿ ಮದ್ಯ ಮಾರಾಟ ಆಗಿದೆ. ಏನ್ ಕ್ರಮ ತಗೊಂಡಿದಿರಿ. ಏನ್ ತಮಾಶೆ ಆಡ್ತಿದದೀರ? ಎಂದು ಕಿಡಿ ಕಾರಿದರು.
ಗ್ರಾಮಸ್ಥರ ಎದುರೇ ಹಳ್ಳಿಗಳನ್ನು ಹಾಳು ಮಾಡುತ್ತಿದ್ದೀರ ನೀವು? ಲೋಪರ್ಸ್ಗಳು. ಮಾರುತ್ತಿರುವುದು ಸಾರ್ವಜನಿಕರಿಗೆ ಗೊತ್ತಿದೆ ನಿಮಗೆ ಗೊತ್ತಿಲ್ವ ? ಬರೀ ಕಥೆ ಹೇಳಬೇಡಿ. ಮಾರುವ ಅಂಗಡಿಗಳ ವಿರುದ್ದ ಕ್ರಮ ತೆಗೆದುಕೊಳ್ಳುವ ಮೊದಲು ಅದನ್ನು ಸಪ್ಲೇ ಮಾಡುವವರ ವಿರುದ್ದ ಕ್ರಮ ತೆಗೆದುಕೊಳ್ಳಿ ಎಂದು ತಾಕೀತು ಮಾಡಿದರು.
ಶಾಸಕರ ಪೋನ್ ಸಂಭಾಷಣೆಗೆ ಹೆದರಿ ಸ್ಥಳಕ್ಕೆ ಬಂದ ಅಬಕಾರಿ ಇನ್ಸ್ ಪೆಕ್ಟರ್ಗೂ ಬಿಸಿ ತಾಕಿಸಿದ ಶಾಸಕ ಸುರೇಶ್ ಗೌಡ ನಿಮಗೇನು ಮಾನ ಮರ್ಯಾದೆ ಇದೆಯಾ.. ಹೀಗೆ ಆದರೆ ಸಸ್ಪೆಂಡ್ ಮಾಡಿಸ್ತೀನಿ ಎಂದು ಎಲ್ಲರೆದುರು ಗದರಿದರು.
ಒಟ್ಟಾರೆ ಈಗಲಾದರೂ ಪ್ರವಾಸಿ ತಾಣವಾದ ಕೋಟೆ ಬೆಟ್ಟ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಬೀಳುತ್ತಾ ಅಥವಾ ಶಾಸಕರ ತರಾಟೆಗೆ ಅಷ್ಟೇ ಸೀಮಿತ ವಾಗುತ್ತಾ ಕಾದು ನೋಡಬೇಕಿದೆ.