FOR BEST NEWS & ADVERTISEMENT CONTACT PRAJAKIRAN - 9341197609
  • ಬಿಜೆಪಿ, ಕಾಂಗ್ರೆಸ್ ರಾಜಕೀಯ ಪ್ರೇರಿತ ದೂರಿಗೆ ಶಾಸಕ ಕೋನರಡ್ಡಿ ತಿರುಗೇಟು


    Date : 2018-05-02 SHARE

    ಹುಬ್ಬಳ್ಳಿ : ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷವಾದ ಜ್ಯಾತ್ಯಾತೀತ ಜನತಾದಳವೂ ರಾಜ್ಯದಲ್ಲಿ ಜೆಡಿಎಸ್ ಸರಕಾರ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಘೋಷಿಸಿದೆ. ಆದರೆ ನವಲಗುಂದ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಈ ಕುರಿತು ನವಲಗುಂದ ವಿಧಾನ ಸಭಾ ಚುನಾವಣಾಧಿಕಾರಿಗೆ ದೂರು ನೀಡುವ ಮೂಲಕ ತಮ್ಮ ಸಣ್ಣತನವನ್ನು ತೋರಿಸಿವೆ ಎಂದು ನವಲಗುಂದ ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಎನ್.ಹೆಚ್. ಕೋನರಡ್ಡಿ ತಿರುಗೇಟು ನೀಡಿದ್ದಾರೆ. ಅವರು ಬುಧವಾರ ನವಲಗುಂದ ತಾಲೂಕಿನ ಭದ್ರಾಪೂರ ಗ್ರಾಮದಲ್ಲಿ ಬಿರುಸಿನ ಪಾದಯಾತ್ರೆ ನಡೆಸಿದ ನಂತರ ಪ್ರಜಾಕಿರಣದೊಂದಿಗೆ ಮಾತನಾಡಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಅವರು ಘೋಷಣೆ ಮಾಡಿದಂತೆ ನಾವು ನವಲಗುಂದ ಕ್ಷೇತ್ರದ ರೈತ ಬಾಂಧವರಿಗೆ ರೈತರ ಸಂಪೂರ್ಣ ಸಾಲಮನ್ನಾದ ಭರವಸೆ ನೀಡುತ್ತಿದ್ದೇವೆ. ಅದನ್ನು ಒಂದು ಆಂದೋಲನದ ರೂಪದಲ್ಲಿ ತೆಗೆದುಕೊಂಡು ಹೋಗುವ ಉದ್ದೇಶದಿಂದ ಜನರ ಮನೆ ಮನೆಗೆ ತೆರಳಿ ಸಾಲಮನ್ನಾ ಕುರಿತಂತೆ ವಸ್ತು ಸ್ಥಿತಿ ಕುರಿತು ಅಭಿಪ್ರಾಯವನ್ನು ಸಂಗ್ರಹಿಸುತ್ತಿದ್ದೇವೆ. ಅಲ್ಲದೆ, ಚುನಾವಣಾ ಪ್ರಮುಖ ಅಂಶಗಳನ್ನು ಜನರ ಮುಂದಿಡುವುದು ಕೂಡ ನಮ್ಮ ಕತ್ಯರ್ವವಾಗಿದೆ. ಅದರಂತೆ ನಾವು ರೈತರಿಗೆ ಸಾಲಮನ್ನಾದ ಭರವಸೆ ನೀಡುತ್ತಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶ ಅಡಗಿಲ್ಲ ಎಂದರು. ಮಾಜಿ ಶಾಸಕ ಶಂಕರ ಪಾಟೀಲ ಅವರಿಗೆ ನಿಜವಾಗಿಯೂ ರೈತರ ಬಗ್ಗೆ ಇಚ್ಛಾಶಕ್ತಿ ಇದ್ದರೆ, ಕೇಂದ್ರದಲ್ಲಿರುವ ಬಿಜೆಪಿ ಸರಕಾರ ಅವರದ್ದೆ ಇದೆ. ಅವರು ಬೇಕಿದ್ದರೆ ತಮ್ಮ ನಾಯಕರಾದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮೇಲೆ ಒತ್ತಡ ಹೇರಿ ರೈತರ ಸಂಪೂರ್ಣ ಸಾಲಮನ್ನಾ ಮಾಡಿಸಲಿ ಎಂದು ಸವಾಲ್ ಹಾಕಿದರು. ನಾವು ಕಾನೂನು ಪ್ರಕಾರ ಚುನಾವಣೆ ಮಾಡುತ್ತಿದ್ದೇವೆ. ಅಲ್ಲದೆ, ಚುನಾವಣಾ ನಿಯಮದಂತೆ ಜಿಲ್ಲಾ ಚುನಾವಣಾಧೀಕಾರಿಗಳಿಗೆ ಒಂದು ಪ್ರತಿಯನ್ನು ನೀಡಿಯೇ ಅದರ ಪರವಾನಿಗೆ ಪಡೆದು ಕಾನೂನು ಪ್ರಕಾರ ಚುನಾವಣೆ ಮಾಡುತ್ತಿದ್ದೇವೆ. ಒಬ್ಬ ಜವಬ್ದಾರಿಯುತ ಮಾಜಿ ಶಾಸಕನಾಗಿ ಅವರಿಗೆ ಅಷ್ಟು ಸಾಮಾನ್ಯ ಜ್ಞಾನ ಇರದಿದ್ದರೆ ಹೇಗೆ ಎಂದು ಪ್ರಶ್ನಿಸಿದ ಶಾಸಕ ಎನ್.ಹೆಚ್. ಕೋನರಡ್ಡಿ ಅವರು ಜನರ ಪ್ರೀತಿ, ವಿಶ್ವಾಸ ಹಾಗೂ ಕ್ಷೇತ್ರದಲ್ಲೆಡೆ ಜೆಡಿಎಸ್ ಪರ ಅಭೂತಪೂರ್ವ ಬೆಂಬಲ ಕಂಡು ಅದನ್ನು ಸಹಿಸದೆ ಜನರನ್ನು ಎತ್ತಿಕಟ್ಟುವ ಕೆಲಸಕ್ಕೆ ಕೈ ಹಾಕಿರುವುದು ಸರಿಯಲ್ಲ ಎಂದರು. ಚುನಾವಣಾಧಿಕಾರಿಗಳ ವಿರುದ್ಧವೇ ಆಪಾದನೆ ಮಾಡುತ್ತಿರುವುದು ನೋಡಿದರೆ ಅವರು ಸಂಪೂರ್ಣ ಹತಾಶರಾದಂತೆ ಕಂಡು ಬರುತ್ತಿದೆ ಎಂದು ಟೀಕಿಸಿದ ಶಾಸಕ ಕೋನರಡ್ಡಿ ಅವರು ಇಂತಹ ಕ್ಷುಲ್ಲಕ ರಾಜಕಾರಣ ಮಾಡುವುದು ಎಷ್ಟರ ಮಟ್ಟಿಗೆ ಸರಿ. ಬಿಜೆಪಿ ಹಾಗೂ ಕಾಂಗ್ರೆಸನವರ ರಾಜಕೀಯ ಪ್ರೇರಿತ ದೂರಿಗೆ ಮಣಿದು ಚುನಾವಣಾಧಿಕಾರಿಗಳು ಒಂದು ವೇಳೆ ಜೆಡಿಎಸ್ ವಿರುದ್ಧ ಪ್ರಕರಣ ದಾಖಲಿಸಿದರೆ ನಾವು ರಾಜ್ಯ ಚುನಾವಣಾ ಆಯೋಗದ ಮೊರೆ ಹೋಗಬೇಕಾಗುತ್ತದೆ ಎಂದು ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಅವರು ಎಚ್ಚರಿಸಿದರು. ನಾವು ಕಾನೂನು ಬದ್ಧವಾಗಿಯೇ ಪರವಾನಿಗೆ ಪಡೆದು ರೈತರ ಸಾಲಮನ್ನಾ ಕುರಿತು ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ. ಇದರಲ್ಲಿ ಯಾವುದೇ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ ಅವರು ತರಾಟೆ ತೆಗೆದುಕೊಂಡರು.