ಬಿಜೆಪಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ
Date : 2018-05-03 SHARE
ಧಾರವಾಡ : ಜಾತಿ, ಧರ್ಮದ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿ ಹುಟ್ಟು ಹಾಕುವ ಬಿಜೆಪಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದಾರೆ ಎಂದು ಕೆಪಿಸಿಸಿ ಹಿರಿಯ ಉಪಾಧ್ಯಕ್ಷ ವೀರಣ್ಣ ಮತ್ತಿಗಟ್ಟಿ ಹೇಳಿದರು. ಅವರು ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರ್ವ ಜನಾಂಗದ ಏಳ್ಗೆ ಬಯಸುವ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಜನ ಕೈ ಹಿಡಿಯುವ ಮೂಲಕ ಮತ್ತೊಮ್ಮೆ ಅಧಿಕಾರ ನೀಡಿ ಜನರ ಸೇವೆಗೆ ಅವಕಾಶ ನೀಡಲಿದ್ದಾರೆ ಎಂದರು. ಮಾತಿನ ಮೇಲೆಯೇ ಸಾಮ್ರಾಜ್ಯ ನಿರ್ಮಿಸುವ ಮೋದಿ ಹಾಗೂ ಅಮಿತ ಶಾ ಅವರಿಂದ ದೇಶದ ಅಭಿವೃದ್ಧಿ ಅಸಾಧ್ಯ. ಜಾತಿ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವ ಇವರೆಲ್ಲ ಅದರ ಮೂಲಕವೇ ಅಧಿಕಾರಕ್ಕೆ ಬರಲು ನೋಡುತ್ತಾರೆ. ಆದರೆ ಕಾಂಗ್ರೆಸ್ ಪಕ್ಷ ಹಾಗಲ್ಲ. ಈ ಸಲವೂ ಜಯಭೇರಿ ಬಾರಿಸುವ ಮೂಲಕ ಮತ್ತೆ ಅಧಿಕಾರಕ್ಕೆ ಬರಲಿದೆ. ಇದು ಶತಸಿದ್ದ ಎಂದರು. ಈ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣ ಆಗಲಿದೆ ಎಂಬ ಮಾಧ್ಯಮಗಳ ಸಮೀಕ್ಷೆ ಇದೆ. ಆದರೆ ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ ೧೩೮ ರಿಂದ ೧೪೨ ಸ್ಥಾನಗಳು ಕಾಂಗ್ರೆಸ್ ಪಕ್ಷಕ್ಕೆ ಬರಲಿದ್ದು, ಬಹುಮತ ಸಿಗಲಿದೆ. ಎಂದರು. ರಾಜ್ಯದ ಜನತೆ ಬಿಜೆಪಿ ತಿರಸ್ಕಾರ ಮಾಡಲಿದ್ದು ಯಡಿಯೂರಪ್ಪ ಸಿಎಂ ಆಗೋದು ದೂರದ ಮಾತು. ಈ ಚುನಾವಣೆಯಲ್ಲಿ ಬಿಜೆಪಿ ೬೦ ಸ್ಥಾನ ಪಡೆಯೋದು ಅಸಾಧ್ಯ ಎಂಬಂತಾಗಿದೆ ಎಂದರು. ದಲಿತ ಸಿಎಂ ಬೇಡ ಅಂತ ನಾನೇನು ಹೇಳಿಲ್ಲ. ಚುನಾವಣೆ ಫಲಿತಾಂಶದ ಬಳಿಕ ಎಲ್ಲರ ಅಭಿಪ್ರಾಯ ಪಕ್ಷದ ವರಿಷ್ಠರು ಪಡೆದು ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ. ಇನ್ನೂ ಸಿಎಂ ಸಿದ್ದರಾಮಯ್ಯ ಅವರು ಎರಡೂ ಸ್ಥಾನಗಳಲ್ಲಿ ಬಹು ಅಂತರಗಳ ಮತಗಳಿಂದ ಆಯ್ಕೆ ಆಗಲಿದ್ದಾರೆ ಎಂದರು. ಬೆಳಗಾವಿಯ ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ಅವರು ಟಿಕೆಟ್ ಆಕಾಂಕ್ಷಿ ಆಗಿದ್ದರು. ಆದರೆ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಅಸಮಾಧಾನಗೊಂಡು ಇಲ್ಲಸಲ್ಲದ, ಆರೋಪ ಮಾಡುತ್ತಿದ್ದಾರೆ. ಅವರ ಮಾತಿನಲ್ಲಿ ಯಾವುದೇ ಹುರುಳಿಲ್ಲ ಎಂದರು.