ಪೊಲೀಸ್ ಇನ್ಸಪೆಕ್ಟರ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು : ಬಿಜೆಪಿಯಿಂದ ಬೃಹತ್ ಪ್ರತಿಭಟನೆ
Date : 2018-05-03 SHARE
ಧಾರವಾಡ : ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸಪೆಕ್ಟರ್ ಪ್ರಶಾಂತ ನಾಯ್ಕ, ಪಿಎಸ್ ಐ ಆನಂದ ಠಕ್ಕನವರ ವಿರುದ್ಧ ಗುರುವಾರ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬಿಜೆಪಿವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು. ರಾಜ್ಯ ಚುನಾವಣಾ ಆಯೋಗಕ್ಕೆ ಜಿಲ್ಲಾಧಿಕಾರಿಗಳ ಮುಖಾಂತರ ಇಬ್ಬರ ವಿರುದ್ಧ ದೂರು ಸಲ್ಲಿಸುವುದರ ಜೊತೆಗೆ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು. ಇದಲ್ಲದೆ, ಕಳೆದ ವಾರವಷ್ಟೇ ಧಾರವಾಡ ಡಿಎಸ್ಪಿ ಚಂದ್ರಶೇಖರ ಹಾಗೂ ಗರಗ ಪಿಎಸ್ಐ ಸಂಗಮೇಶ ಹಾಲಹಾವಿ ವಿರುದ್ಧವೂ ದೂರು ನೀಡಲಾಗಿದೆ. ಆದರೆ ಈವರೆಗೆ ಜಿಲ್ಲಾಡಳಿತ ಅವರನ್ನು ಸೇವೆಯಿಂದ ಹೊರಗಿಟ್ಟಿಲ್ಲ ಎಂದು ಅಸಮಾಧಾನವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಸೋಲಿನಿಂದ ಕಂಗೆಟ್ಟಿದ್ದಾರೆ. ಸೋಲನ್ನು ಹೆಗಲ ಮೇಲೆ ಹೊತ್ತುಕೊಂಡು ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಹೀಗಾಗಿ ತಮ್ಮ ಜಿಲ್ಲಾ ಉಸ್ತುವಾರಿ ಸಚಿವರ ಹುದ್ದೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಕೆಲವರಿಗೆ ನೇರವಾಗಿ ಧಮ್ಕಿ ಹಾಕಿದರೆ,ಇನ್ನು ಕೆಲವರಿಗೆ ತಮ್ಮ ಚೇಲಾಗಳಿಂದ ಹಾಗೂ ಇಬ್ಬರಿಗೂ ಡೊಗ್ಗದಿದ್ದಾಗ ಪೊಲೀಸರ ಮೂಲಕ ಒತ್ತಡ ಹಾಕುವ ಕೆಲಸ ಮಾಡಿಸುತ್ತಿದ್ದಾರೆ. ಪೊಲೀಸರು ಸಚಿವರ ಚೇಲಾಗಳಂತೆ ಕಾರ್ಯನಿರ್ವಹಿಸುವುದು ಸರಿಯಲ್ಲ. ಅವರು ಸಚಿವ ವಿನಯ ಕುಲಕರ್ಣಿ ಅವರ ವಾಲೀಕಾರರಂತೆ ಕಾರ್ಯನಿರ್ವಹಿಸುವುದು ಸರಿಯಲ್ಲ. ಬಿಜೆಪಿಯ ಜನ ಬೆಂಬಲ ನೋಡಿ ಸಚಿವ ವಿನಯ ಕುಲಕರ್ಣಿ ದಿಕ್ಕು ತಪ್ಪಿದ್ದಾರೆ. ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತರಿಗೆ ಧಮ್ಕಿ ಕೊಟ್ಟಿರುವುದು ನೋಡಿದರೆ, ಅವರು ಸೋಲಿನಿಂದ ಹತಾಶರಾಗಿ ಇಂತಹ ಕೆಟ್ಟ ಕೆಲಸಗಳಿಗೆ ಕೈ ಹಾಕಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದು ಆರೋಪಿಸಿದರು. ಬಿಜೆಪಿಯ ಮುಖಂಡ ಗುರುನಾಥಗೌಡ ಅವರಿಗೆ ಪೊಲೀಸರು ಎನ್ ಕೌಂಟರ್ ಮಾಡುತ್ತೇವೆ ಎಂದು ಹೇಳಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಇಷ್ಟಕ್ಕೆ ನಮ್ಮ ಗುರುನಾಥಗೌಡ ಅವರು ಹೆದರಿಲ್ಲ. ಜೀವ ಎಲ್ಲ ಹೋಗವುದು ಒಂದೇ ಸಲ. ಆದರೆ ಆ ದುಷ್ಟ ವಿನಯ ಕುಲಕರ್ಣಿ ಕ್ಷೇತ್ರದಿಂದ ಮನೆಗೆ ಹೋಗಬೇಕಿದೆ ಎಂಬ ನಿರ್ಧಾರದಿಂದ ಹೋರಾಟ ನಡೆಸುತ್ತಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಡಿಎಸ್ಪಿ ಚಂದ್ರಶೇಖರ, ಗರಗ ಪಿಎಸ್ ಐ ಸಂಗಮೇಶ ಹಾಲಬಾವಿ ಅವರ ವಿರುದ್ಧ ಒಂದು ವಾರದ ಹಿಂದ ದೂರು ನೀಡಿದರೂ ಈವರೆಗೆ ಯಾವುದೇ ಉತ್ತರ ಸಿಕ್ಕಿಲ್ಲ. ಈಗ ಮತ್ತೇ ಧಾರವಾಡ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಪ್ರಶಾಂತ ನಾಯ್ಕ, ಪಿಎಸ್ಐ ಆನಂದ ಠಕ್ಕನವರ ವಿರುದ್ದವೂ ದೂರು ನೀಡಿದ್ದೇವೆ. ಸಚಿವರ ಅಣತಿಯಂತೆ ಕೆಲಸ ಮಾಡುವುದನ್ನು ಬಿಡಬೇಕಿದೆ. ಬಿಜೆಪಿಯ ಗಟ್ಟಿ ಕಾರ್ಯಕರ್ತರನ್ನು ಅಲುಗಾಡಿಸುವ ಕೆಲಸ ಮಾಡುತ್ತಿದ್ದಾರೆ. ವಾರ್ಡನಂ 10ರಲ್ಲಿ ನೇರವಾಗಿ ಸಚಿವ ವಿನಯ ಕುಲಕರ್ಣಿ ಅವರು ನಮ್ಮ ಕಾರ್ಯಕರ್ತ ಶ್ರೀನಿವಾಸ ಕೋಟ್ಯಾನ ಅವರಿಗೆ ಬೆದರಿಕೆ ಹಾಕಿದ್ದರು. ಇನ್ನೊಬ್ಬ ಕಾರ್ಯಕರ್ತ ಸಚಿನ ಹಲಗೇರಿ ಅವರಿಗೆ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದೀಗ ಗುರುನಾಥ ಗೌಡ ಅವರಿಗೆ ಪೊಲೀಸ್ ಎನ್ಕೌಂಟರ್ ಮಾಡುತ್ತೀವಿ ಎಂದು ಹೇಳಿದ್ದು ನೋಡಿದರೆ ಇವರು ರಕ್ಷಣೆ ಮಾಡಕ್ಕ ಇದ್ದಾರೋ ಅಥವಾ ಕೊಲೆ ಮಾಡಕ್ಕ ಇದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದು ಕಿಡಿ ಕಾರಿದರು. ಇವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಬರುವ ದಿನಗಳಲ್ಲಿ ಬೃಹತ್ ಸಂಖ್ಯೆಯಲ್ಲಿ ಜಿಲ್ಲಾಧೀಕಾರಿ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ. ಪೊಲೀಸರು ವಾಲೀಕಾರಕ್ಕೀ ಮಾಡುವುದು ಬಿಟ್ಟು ಸರಕಾರದ ಕೆಲಸ ಮಾಡಿರಿ ಎಂದು ಎಚ್ಚರಿಸಿದರು.