ಸಚಿವ ಸಂತೋಷ್ ಲಾಡ್ ಗೆ ಖಾಲಿ ಕೊಡ ತೋರಿಸಿದ ಮಹಿಳೆಯರು
Date : 2018-05-04 SHARE
ಧಾರವಾಡ: ಸಚಿವ ಸಂತೋಷ್ ಲಾಡ್ ಪ್ರಚಾರದ ವೇಳೆ ಖಾಲಿ ಕೊಡ ಪ್ರದರ್ಶಿಸಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. ಕಲಘಟಗಿ ತಾಲೂಕಿನ ಹಿರೇಹೊನ್ನಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಖಾಲಿ ಕೊಡಗಳ ಸಮೇತ ಪ್ರಚಾರದ ವಾಹನಕ್ಕೆ ಮುತ್ತಿಗೆ ಹಾಕಿ ಅಸಮಾಧಾನ ಹೊರ ಹಾಕಿದರು. ಲಾಡ್ ಪ್ರಚಾರದ ವಾಹನಕ್ಕೆ ಮುತ್ತಿಗೆ ಹಾಕಿದ ಮಹಿಳೆಯರು ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸದಕ್ಕೆ ವಿರೋಧ ವ್ಯಕ್ತಪಡಿಸಿದರು. ಚುನಾವಣೆ ಸಂದರ್ಭದಲ್ಲಿ ಮಾತ್ರ ಬಂದ್ರೆ ಹೇಗೆ ಎಂದು ತರಾಟೆ ತೆಗೆದುಕೊಂಡ ಮಹಿಳೆಯರು ಶಾಸಕ ಸಂತೋಷ ಲಾಡ್ ಗೆ ಪ್ರಶ್ನೆಗಳ ಸುರಿಮಳೆ ಹರಿಸಿದರು. ಮಹಿಳೆಯರು ಮುತ್ತಿಗೆ ಹಾಕಿದ ಸಂದರ್ಭದಲ್ಲಿ ತಳ್ಳಾಟ ನೂಕಾಟ ನಡೆಯಿತು. ತಮ್ಮನ್ನು ಗುರಿಯಾಗಿಸಿ ತಳ್ಳಾಟ ನೂಕಾಟ ಮಾಡಲಾಗಿದೆ ಎಂದು ಮಹಿಳೆಯರು ಕಿಡಿ ಕಾರಿದರು. ಕಾಂಗ್ರೆಸ್ ಕಾರ್ಯಕರ್ತರು ತಳ್ಳಾಟ ಮಾಡಿದ್ದಾರೆಂದು ಆರೋಪ ಮಾಡಿದ ಮಹಿಳೆಯರು ಕಲಘಟಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಅಲ್ಲದೆ, ತಮಗೆ ರಕ್ಷಣೆ ಒದಗಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ.