ರಂಭಾಪುರಿ ಪೀಠಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ
Date : 2018-05-01 SHARE
ಚಿಕ್ಕಮಗಳೂರು: ಬಾಳೆಹೊನ್ನೂರು ರಂಭಾಪುರಿ ಪೀಠಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಂಗಳವಾರ ಮಧ್ಯಾಹ್ನ ಭೇಟಿ ನೀಡಿದರು. ಶೃಂಗೇರಿಯಿಂದ ಹೆಲಿಕಾಪ್ಟರ್ ಮೂಲಕ ಬಾಳೆಹೊನ್ನೂರಿಗೆ ಆಗಮಿಸಿದ ಅಮಿತ್ ಶಾ ಅವರು ಸ್ವಾಮೀಜಿಯ ಭೇಟಿಗೂ ಮುನ್ನ ಮಠದ ಆವರಣದ ಸೋಮೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಬಳಿಕ ರಂಭಾಪುರಿ ಶ್ರೀಗಳ ಪಾದಕ್ಕೆ ನಮಸ್ಕರಿಸಿದರು. ಈ ವೇಳೆ ಅಮಿತ್ ಶಾ ಅವರಿಗೆ ರಂಭಾಪುರಿ ಶ್ರೀಗಳು ಶಾಲು ಹೊದಿಸಿ, ಜಗದ್ಗುರು ರೇಣುಕಾಚಾರ್ಯರ ಫೋಟೋ ನೀಡಿ ಸತ್ಕರಿಸಿದರು. ಬಳಿಕ ರಂಭಾಪುರಿ ಶ್ರೀಗಳ ಜೊತೆ ಕೆಲ ಕಾಲ ರಹಸ್ಯ ಮಾತುಕತೆ ನಡೆಸಿದ ಅಮಿತ್ ಶಾ ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ಆಶೀರ್ವಾದ ಮಾಡಲು ಕೋರಿದರು. ಸ್ಥಳೀಯ ಪೊಲೀಸ್ ಹಾಗೂ ಸಿ.ಆರ್.ಪಿ.ಎಫ್ ತಂಡದಿಂದ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ಅಮಿತ್ ಶಾ ಭೇಟಿ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಮಠದ ಭೇಟಿಗೆ ನಿಷೇಧ ಹೇರಲಾಗಿತ್ತು. ಭೇಟಿಯ ಬಳಿಕ ಮಠದಲ್ಲೇ ಅಮಿತ್ ಶಾ ಅವರು ಚಪಾತಿ, ಎರಡು ತರಹದ ಪಲ್ಯ,ದಾಲು,ರೈಸ್, ಮೊಸರು ಪ್ರಸಾದ ಸ್ವೀಕರಿಸಿದರು. ಮಠದ ಆವರಣದಲ್ಲಿ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.