ಬಿಜೆಪಿ ಅಭ್ಯರ್ಥಿಗೆ ಹೂವು ಚೆಲ್ಲಿ, ಆರತಿ ಬೆಳಗಿ ಸ್ವಾಗತಿಸಿದ ಗ್ರಾಮಸ್ಥರು
Date : 2018-05-01 SHARE
ಧಾರವಾಡ: ಧಾರವಾಡ ವಿಧಾನ ಸಭಾ ಕ್ಷೇತ್ರ -71ರಲ್ಲಿ ಚುನಾವಣೆ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಮಂಗಳವಾರ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಅವರಿಗೆ ಧಾರವಾಡ ತಾಲೂಕಿನ ಗುಳೇದಕೊಪ್ಪ ಗ್ರಾಮಸ್ಥರು ಹೂವು ಚೆಲ್ಲಿ, ಆರತಿ ಬೆಳಗಿ ಸ್ವಾಗತ ಕೋರಿದರು. ಪ್ರತಿ ಮನೆಯಲ್ಲಿ ಮಹಿಳೆಯರು ಆರತಿ ಬೆಳಗಿ, ಕುಂಕುಮ ಹಚ್ಚಿ, ಸ್ವಾಗತ ಕೋರಿ, ಶುಭ ಹಾರೈಸಿದರು. ಇದೇ ವೇಳೆ ಗ್ರಾಮಸ್ಥರು ಅಮೃತ ದೇಸಾಯಿ ಅವರಿಗೆ ಹೂವಿನ ಸುರಿಮಳೆ ಹರಿಸಿ ಸ್ವಾಗತ ಕೋರಿದರು. ಬಳಿಕ ಗ್ರಾಮದಲ್ಲಿರುವ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರಚಾರ ಪ್ರಾರಂಭಿಸಿದ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಅವರಿಗೆ ಬಿಜೆಪಿ ಮುಖಂಡರಾದ ತವನಪ್ಪ ಅಷ್ಟಗಿ, ಗುರುನಾಥ ಗೌಡ ಗೌಡರ, ತಾಪಂ ಸದಸ್ಯರಾದ ಮಮತಾಜ ಅಂಕಲಗಿ, ಶಿವಾಜಿ ಜಾಧವ, ಎಂ.ಕದಂ, ಚಂದ್ರು ಚವ್ಹಾಣ, ಬಾಳು ಜಾಧವ, ತುಕಾರಾಮ ನಾಗೊಜಿ ಸೇರಿದಂತೆ ಅನೇಕರು ಸಾಥ್ ನೀಡಿದರು. ಭಾರೀ ಜನಸಮೂಹದೊಂದಿಗೆ ಗ್ರಾಮದಲ್ಲಿ ಬಿರುಸಿನ ಪಾದಯಾತ್ರೆ ನಡೆಸಿದ ಅಮೃತ ದೇಸಾಯಿ ಅವರು, ಮನೆ ಮನೆಗೆ ತೆರಳಿ ಮತ ಯಾಚಿಸಿದರು. ಈ ಬಾರಿ ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರದಲ್ಲಿ ಕಮಲ ಅರಳಿಸುವ ಮೂಲಕ ಕಾಂಗ್ರೆಸನ ಭ್ರಷ್ಟ ಸರಕಾರಕ್ಕೆ ಮುಕ್ತಿ ಹಾಡಬೇಕು. ನವ ಕರ್ನಾಟಕ ನಿರ್ಮಾಣಕ್ಕೆ ಕಂಕಣ ಬದ್ಧರಾಗಿರುವ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಕೈ ಬಲಪಡಿಸಲು ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು. ಭಾರಿ ಪ್ರಮಾಣದಲ್ಲಿ ಸೇರಿದ ಜನಸಮೂಹದ ಮೂಲಕ ಅಮೃತ ದೇಸಾಯಿ ಅವರು ತಮ್ಮ ಶಕ್ತಿ ಪ್ರದರ್ಶನ ಮಾಡಿದರು. ಬಳಿಕ ವೆಂಕಟಾಪುರ ಗ್ರಾಮದಲ್ಲಿ ಬಿರುಸಿನ ಪ್ರಚಾರ ನಡೆಸಿ ಮತದಾರರ ಗಮನ ಸೆಳೆದರು.