ಶೋಭಾಗೆ ಟಿಕೆಟ್ ಕೊಡಿಸಲು ಆಗದ ಯಡಿಯೂರಪ್ಪ
Date : 2018-05-02 SHARE
ಹುಬ್ಬಳ್ಳಿ : ಸಂಸದೆ ಶೋಭಾ ಕರಂದ್ಲಾಜೆ ಟಿಕೆಟ್ ಕೊಡಿಸಲು ಆಗದವ ಯಡಿಯೂರಪ್ಪ ನಮ್ಮ ಬಗ್ಗೆ ಏನ್ ಹೇಳುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಗುಡುಗಿದರು. ಅವರು ಬುಧವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಡಿಯೂರಪ್ಪ ಮಗನಿಗೆ ಟಿಕೆಟ್ ತಪ್ಪಿಸಿದವರು ಯಾರು ಎಂದು ಮೊದಲು ಹೇಳಲಿ ಎಂದರು. ಸಂತೋಷ, ಅನಂತಕುಮಾರ್, ಜಗದೀಶ ಶೆಟ್ಟರ್, ಈಶ್ವರಪ್ಪ ಸೇರಿ ಟಿಕೆಟ್ ತಪ್ಪಿಸಿದ್ದಾರೆ ಎಂದು ಆರೋಪಿಸಿದರು. ವಿಜಯೇಂದ್ರ ವರುಣಾದಲ್ಲಿ ಮನೆ ಮಾಡಿ, ಒಂದು ತಿಂಗಳು ಪ್ರಚಾರ ಮಾಡಿದ್ದ. ಅಪ್ಪ ಹೈಕಮಾಂಡ್ ಗೂ ಹೇಳಿ ಚುನಾವಣೆಗೆ ತಯಾರಿ ಮಾಡಿಸಿದ್ದರು. ಯಡಿಯೂರಪ್ಪ ಪಕ್ಷದಲ್ಲಿ ಎಲ್ಲರೂ ಒಟ್ಟಾಗಿ ಇದ್ದರೆ ವಿಜಯೇಂದ್ರಗೆ ಟಿಕೆಟ್ ತಪ್ಪುತ್ತಿರಲಿಲ್ಲ ಎಂದು ಕುಟುಕಿದರು. ನಮಗೆ ಉತ್ತರ ಕರ್ನಾಟಕ ಭಾಗದಲ್ಲಿ ನಿರೀಕ್ಷೆಗೂ ಮೀರಿ ಜನಸ್ಪಂದನೆ ಸಿಗುತ್ತಿದೆ. ನಮ್ಮ ಯೋಜನೆಗಳಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದ ಅವರು ನಾನು ಈ ಭಾಗದಲ್ಲಿ ಪ್ರಚಾರ ಮಾಡುತ್ತಿದ್ದೇನೆ. ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ, ಡಿ.ಕೆ. ಶಿವಕುಮಾರ್ ರಾಜ್ಯಾದ್ಯಂತ ಪ್ರಚಾರ ಮಾಡುತ್ತಿದ್ದಾರೆ. ನಾವೆಲ್ಲ ಒಟ್ಟಾಗಿ ಇದ್ದೇವೆ ಎಂದರು. ಮೋದಿಯವರು ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರಿಗೆ ವೃದ್ಧಾಶ್ರಮಕ್ಕೆ ಹೋಗಲು ಹೇಳಿದ್ದರು. ಆದರೆ ಈಗ ರಾಜಕೀಯ ಕಾರಣಕ್ಕೆ ದೇವೇಗೌಡರ ಬಗ್ಗೆ ಮೋದಿ ಹೊಗಳುತ್ತಿದ್ದಾರೆ. ಇದೆಲ್ಲ ನೋಡಿದ್ರೆ ಜೆಡಿಎಸ್, ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿ ಕಾಣುತ್ತೆ ಎಂದ ಅವರು ನಾನು ಜೆಡಿಎಸ್ ವಿರುದ್ಧ ಟೀಕೆ ಮಾಡುತ್ತೇನೆ. ಮೈಸೂರು ಭಾಗದಲ್ಲಿ ಓನ್ಲಿ ಜೆಡಿಎಸ್ ಮೇಲೆ ಅಟ್ಯಾಕ್ ಮಾಡುತ್ತೇನೆ ಎಂದರು.