FOR BEST NEWS & ADVERTISEMENT CONTACT PRAJAKIRAN - 9341197609
  • ಸಾವಿರಾರು ಸೀರೆ ವಶಪಡಿಸಿಕೊಂಡ ಚುನಾವಣಾಧಿಕಾರಿಗಳು


    Date : 2018-05-02 SHARE

    ಧಾರವಾಡ: ಸೂಕ್ತ ದಾಖಲೆಗಳಿಲ್ಲದೆ ಅಕ್ರಮವಾಗಿ ಸಂಗ್ರಹಿಸಿದ್ದ 4,050 ಸೀರೆಗಳನ್ನು ಚುನಾವಣಾಧಿಕಾರಿಗಳು ಬುಧವಾರ ವಶಕ್ಕೆ ಪಡೆದ ಘಟನೆ ಧಾರವಾಡದಲ್ಲಿ ನಡೆದಿದೆ. ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತ್ತಿಕೊಳ್ಳದ ರತ್ನಾ ಸಿಮೆಂಟ್ ಬ್ಲಾಕ್ ತಯಾರಿಕಾ ಘಟಕದಲ್ಲಿ ಈ ಸೀರೆಗಳು ಸಿಕ್ಕಿದ್ದು, ಮತದಾರರಿಗೆ ಹಂಚಲು ಸಂಗ್ರಹಿಸಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಚುನಾವಣಾಧಿಕಾರಿಗಳು ಈ ಅಕ್ರಮವನ್ನು ಪತ್ತೆ ಮಾಡಿದ್ದಾರೆ. ಅಸ್ಲಾಂ ಗೋಕಾಕ್ ಒಡೆತನದ ರತ್ನಾ ಸಿಮೆಂಟ್ ಗೋದಾಮು ಮೇಲೆ ದಾಳಿ ನಡೆಸಿದ ಚುನಾವಣಾ ಅಧಿಕಾರಿಗಳು ಎಲ್ಲ ಸೀರೆಗಳನ್ನು ಜಪ್ತಿ ಮಾಡಿ ಪೊಲೀಸರಿಗೆ ಹಸ್ತಾಂತರ ಮಾಡಿದರು. ಅವರು ಇವು ಯಾರಿಗೆ ಸೇರಿದ್ದು ಮತ್ತೇ ಏತಕ್ಕಾಗಿ ಇಲ್ಲಿ ಸಂಗ್ರಹಿಸಿಡಲಾಗಿತ್ತು ಎಂಬುದು ಪತ್ತೆ ಹಚ್ಚುವ ಕೆಲಸ ಮಾಡಬೇಕಿದೆ ಎಂದು ಚುನಾವಣಾಧಿಕಾರಿ ಜಯಮಾಧವ್ ಅವರು ಪ್ರಜಾಕಿರಣಕ್ಕೆ ತಿಳಿಸಿದ್ದಾರೆ. ರತ್ನಾ ಸಿಮೆಂಟ್ ಮಾಲೀಕ ಅಸ್ಲಾಂ ಗೋಕಾಕ್ ದಾಳಿ ವೇಳೆ ಲಭ್ಯ ಇರಲಿಲ್ಲ. ಹೀಗಾಗಿ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಆ ಸೀರೆಗಳು ಯಾರಿಗೆ ಸೇರಿದ್ದು ಎಂಬ ಸತ್ಯಾಂಶ ಹೊರಬರಲಿದೆ ಎಂದು ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಚುನಾವಣಾಧಿಕಾರಿ ವೆಂಕಟೇಶ ಮೂರ್ತಿ ಪ್ರಜಾಕಿರಣಕ್ಕೆ ತಿಳಿಸಿದರು. ಸೀರೆಗಳ ಮೇಲೆ ಯಾವುದೇ ಪಕ್ಷದ ಚಿಹ್ನೆ ಅಥವಾ ಅಭ್ಯರ್ಥಿಯ ಭಾವಚಿತ್ರ ಇರಲಿಲ್ಲ. ಹೀಗಾಗಿ, ಸೀರೆಗಳನ್ನು ದಾಸ್ತಾನು ಮಾಡಿದ ಘಟಕದ ಮಾಲೀಕರಿಗೆ ಸೂಕ್ತ ದಾಖಲೆ ನೀಡುವಂತೆ ನೋಟಿಸ್ ನೀಡಲಾಗಿದೆ ಎಂದರು. ಈ ಕುರಿತು ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.