ನಗದು, ಸರಕು ಜಪ್ತಿ ಧಾರವಾಡಕ್ಕೆ 2ನೇ ಸ್ಥಾನ
Date : 2018-05-08 SHARE
ಧಾರವಾಡ : ಬೆಂಗಳೂರನ್ನು ಹೊರತುಪಡಿಸಿದರೆ ನಗದು ಹಾಗೂ ಸರಕು ಸಾಗಾಣಿಕೆ ಜಪ್ತಿ ಕಾರ್ಯದಲ್ಲಿ ಧಾರವಾಡ ಜಿಲ್ಲೆಯು ರಾಜ್ಯದಲ್ಲಿಯೇ 2ನೇ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ. ಬೊಮ್ಮನಳ್ಳಿ ಹೇಳಿದರು. ಈವರೆಗೆ 7 ಕೆ.ಜಿ. 732 ಗ್ರಾಂ. ಬಂಗಾರ, 6 ಕೆ.ಜಿ. 465 ಗ್ರಾಂ. ಬೆಳ್ಳಿ, 1 ಕೋಟಿ 25 ಲಕ್ಷ ಮೌಲ್ಯದ ಮದ್ಯ, 28 ಲಕ್ಷಕ್ಕೂ ಹೆಚ್ಚು ಮೌಲ್ಯದ 1087 ಕುಕ್ಕರ್ಗಳು, 2 ಲಕ್ಷ ಮೌಲ್ಯದ ಟಿ-ಶರ್ಟಗಳು, 20 ಕಾರುಗಳು, 60 ದ್ವಿಚಕ್ರವಾಹನಗಳು, 2 ಲಾರಿಗಳು ಮತ್ತು 6 ಲಕ್ಷ ಮೌಲ್ಯದ 3840 ಸೀರೆಗಳನ್ನು ಮೇ 6ರ ವರೆಗೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಲ್ಲಿ ಜಪ್ತ ಮಾಡಲಾಗಿದೆ ಎಂದು ವಿವರಿಸಿದರು. ನಿಷೇಧಾಜ್ಞೆ ಜಾರಿ: ಮತದಾನ ಕೊನೆಗೊಳ್ಳುವ 48 ಗಂಟೆಗಳ ಮುನ್ನ ಅಂದರೆ ಮೇ 10ರ ಸಂಜೆ 6 ಗಂಟೆಯಿಂದ ಮೇ 13ರ ಸಂಜೆ 6 ಗಂಟೆಯ ವರೆಗೆ ಕಾನೂನು ಮತ್ತು ಸುವ್ಯವಸ್ಥೆ ಪಾಲನೆಗಾಗಿ ಅಪರಾಧ ದಂಡ ಸಂಹಿತೆ 144ನೇ ಕಲಂನಡಿ ನಿಷೇಧಾಜ್ಞೆ ಜಾರಿಗೊಳಿಸಲಾಗುತ್ತಿದೆ. ಆದರೆ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳು ಗರಿಷ್ಟ 10 ಜನರೊಂದಿಗೆ ಮನೆ ಮನೆಗಳಿಗೆ ತೆರಳಿ ಮತಯಾಚನೆ ಮಾಡಬಹುದು. ಕ್ಷೇತ್ರದ ಮತದಾರರಲ್ಲದವರು ಮತದಾನದ 48 ಗಂಟೆಗಳ ಮುಂಚೆ ಕ್ಷೇತ್ರ ತೊರೆಯಬೇಕು ಎಂದು ಎಚ್ಚರಿಸಿದರು.