ಬೆದರಿಕೆ ಹಾಕಿದ್ದರಿಂದ ಪ್ರಚಾರ ನಡೆಸದ ಸ್ಥಿತಿ
Date : 2018-05-08 SHARE
ಧಾರವಾಡ : ಹುಬ್ಬಳ್ಳಿ ಧಾರವಾಡ ಪಶ್ವಿಮ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ತಮಗೆ ಬೆದರಿಕೆ ಹಾಕಿದ್ದರಿಂದ ಪ್ರಚಾರ ನಡೆಸದ ಸ್ಥಿತಿ ಉದ್ಭವಿಸಿದೆ ಎಂದು ಜೆಡಿಯು ಅಭ್ಯರ್ಥಿ ಜಾವೇದ್ಅಹಮ್ಮದ್ ಬೆಳಗಾಂವಕರ ಆರೋಪಿಸಿದರು. ಅವರು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಮಪತ್ರ ಸಲ್ಲಿಸದಂತೆ ಕಾಂಗ್ರೆಸ್ ಅಭ್ಯರ್ಥಿ ಇಸ್ಮಾಯಿಲ್ ತಮಟಗಾರ, ಅವರ ಸಹೋದರ ಇಸಾಕ್ ತಮಟಗಾರ ಹಾಗೂ ಬೆಂಬಲಿಗರು ಜೀವ ಬೆದರಿಕೆ ಹಾಕಿದ್ದಲ್ಲದೇ, ಮನೆಗೆ ಹಾನಿ ಮಾಡಿದ್ದಾರೆ ಎಂದು ಗೋಳು ತೋಡಿಕೊಂಡರು. ಒಂದೇ ಸಮುದಾಯದಿಂದ ಇಬ್ಬರು ಕಣದಲ್ಲಿದ್ದರೆ ಮತಗಳ ವಿಭಜನೆಯಾಗುವ ಸಾಧ್ಯತೆ ಇದೆ ಎಂದು ನಾಮಪತ್ರ ಹಿಂಪಡೆಯುವಂತೆ ದುಂಬಾಲು ಬಿದ್ದಿದ್ದರು. ಇದೇ ಕಾರಣಕ್ಕೆ ಹುಬ್ಬಳ್ಳಿಯ ಅವರ ಸಂಬಂಧಿಕರ ಮನೆಗೆ ಕರೆಯಿಸಿ ಬೆದರಿಕೆ ಹಾಕಿದ್ದರು. ಆದರೆ ನಾನು ಭ್ರಷ್ಟಾಚಾರದ ವಿರುದ್ಧ ಸತತವಾಗಿ ಹೋರಾಟ ನಡೆಸುತ್ತಿರುವ ಕಾರಣ ಅವರ ಹೆದರಿಕೆಗೆ ತಲೆಕೆಡಿಸಿಕೊಳ್ಳದೇ ಕಣದಲ್ಲಿದ್ದೇನೆ ಎಂದರು. ಇಸ್ಮಾಯಿಲ್ ತಮಟಗಾರ ಅವರು ಬೆದರಿಕೆ ಹಾಕಿರುವ ಕುರಿತು ಚುನಾವಣೆ ಆಯೋಗ, ಪೊಲೀಸ ಆಯುಕ್ತರಿಗೆ ದೂರು ನೀಡಿದ್ದರಿಂದ ಉಪನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ. ಜೀವ ಬೆದರಿಕೆಯಿಂದ ಪ್ರಚಾರ ನಡೆಸಲು ತೊಂದರೆಯಾಗಿದೆ. ರಕ್ಷಣೆ ನೀಡುವಂತೆ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದು, ಅವರು ಸಹ ರಕ್ಷಣೆ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು. ಇನ್ನೆರಡು ದಿನಗಳಲ್ಲಿ ಮತ್ತೇ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ರಕ್ಷಣೆ ನೀಡುವಂತೆ ಮನವಿ ಮಾಡುತ್ತೆನೆ. ಸುಮುದಾಯದ ಕೆಲ ಜನರು ತಮಗೆ ಬೆಂಬಲ ನೀಡಲು ಮುಂದಾಗಿದ್ದು, ಶೀಘ್ರದಲ್ಲಿಯೇ ಅವರೊಂದಿಗೆ ಮಾತುಕತೆ ನಡೆಸಿ ಸೂಕ್ತ ನಿರ್ಧಾರಕ್ಕೆ ಬರಲಾಗುವುದು ಎಂದರು.