FOR BEST NEWS & ADVERTISEMENT CONTACT PRAJAKIRAN - 9341197609
  • ರಾಹುಲ್ ಗಾಂಧಿ ಅಪ್ರಬುದ್ಧರಂತೆ ವರ್ತನೆ : ಶಿವರಾಜ್ ಸಿಂಗ್ ಚವ್ಹಾಣ


    Date : 2018-05-09 SHARE

    ಹುಬ್ಬಳ್ಳಿ : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಪ್ರಬುದ್ಧರಂತೆ ವರ್ತಿಸುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಧರ್ಮವನ್ನ ಒಡೆಯುತ್ತಿದೆ ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜಸಿಂಗ್ ಚವ್ಹಾಣ ಹೇಳಿಕೆ ನೀಡಿದ್ದಾರೆ. ಅವರು ಬುಧವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕರ್ನಾಟಕದಲ್ಲಿ ರಾಜಕೀಯ ತುಷ್ಟಿಕರಣ ಮಾಡಲಾಗುತ್ತಿದೆ. ಕೇವಲ ಒಂದು ಸಮುದಾಯದ ಓಲೈಕೆ ಮಾಡಲಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಜನತೆ ಬೇಸತ್ತಿದ್ದಾರೆ. ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸಿದೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಯಾವುದೇ ಚುನಾವಣೆ ಗೆಲ್ಲಲು ನಾಯಕತ್ವ, ಸಂಘಟನೆ, ವಿಚಾರಧಾರೆ ಈ ಮೂರು ಅಂಶಗಳು ಮುಖ್ಯವಾಗುತ್ತೆ. ಈ‌ ಮೂರು ಅಂಶಗಳು ಭಾರತೀಯ ಜನತಾ ಪಕ್ಷ ಹೊಂದಿದೆ. ಹೀಗಾಗಿ ಕರ್ನಾಟದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದ ಅವರು ಸ್ವಾಮಿ ವಿವೇಕಾನಂದರು, ಸರ್ದಾರ ವಲ್ಲಭಬಾಯಿ ಪಟೇಲ ಹಾಗೂ ಮಹಾತ್ಮಾ ಗಾಂಧಿ ಅವರ ಕನಸು ಸಾಕಾರ ಗೊಳಿಸುವ ಕಾರ್ಯ ಪ್ರಧಾನಿ ಮಾಡುತ್ತಿದ್ದಾರೆ ಎಂದರು. ಭಾರತದಲ್ಲಿ ಹೊಸ ಪರ್ವ ಪ್ರಾರಂಭವಾಗಿದೆ. ದೇಶ ಅಭಿವೃದ್ಧಿ ಪಥದಲ್ಲಿ ನಡೆಯುತ್ತಿದೆ ಎಂದ ಅವರು ಕಾಂಗ್ರೆಸ್ ಪಕ್ಷದವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರ ದಲಿತರ ವಿರುದ್ಧವಿದೆ ಎಂದು ಸುಳ್ಳು ಹೇಳಲಾಗುತ್ತಿದೆ. ಆದರೆ, ದಲಿತರಿಗೆ ಅನ್ಯಾಯ ಮಾಡಿದ್ದು ಕಾಂಗ್ರೆಸ್ಸಿಗರೆ ಹೊರತು ಬಿಜೆಪಿ ಅಲ್ಲ. ಪ್ರಧಾನಿ ಮೋದಿ ಸರಕಾರ ಪ್ರತಿ ರಾಜ್ಯಕ್ಕೆ ತೆರಿಗೆಯಲ್ಲಿ ಶೇ.೧೦ ರಷ್ಟು ಅಧಿಕ ಲಾಭ‌ ನೀಡಿದೆ ಎಂದರು.