ಯಡಿಯೂರಪ್ಪನನ್ನು ಮುಖ್ಯಮಂತ್ರಿ ಮಾಡಲು ಹೊರಟಿರುವುದು ನಾಚಿಗೇಡಿನ ಸಂಗತಿ ಎಂದ ವಿನಯ ಕುಲಕರ್ಣಿ
Date : 2018-05-09 SHARE
ಧಾರವಾಡ : ಜೈಲು ಹೊಕ್ಕು ಬಂದಿರುವ ಯಡಿಯೂರಪ್ಪನವರನ್ನು ಬಿಜೆಪಿ ನಾಯಕರು ರಾಜ್ಯದ ಮುಖ್ಯಮಂತ್ರಿಯನ್ನಾಗಿಸಲು ಹೊರಟಿರುವುದು ತೀರಾ ನಾಚಿಗೇಡಿನ ಸಂಗತಿಯಾಗಿದೆ ಎಂದು ಧಾರವಾಡ ವಿಧಾನಸಭಾ ಕ್ಷೇತ್ರ-೭೧ರ ಅಭ್ಯರ್ಥಿ ಹಾಗೂ ಸಚಿವ ವಿನಯ ಕುಲಕರ್ಣಿ ವ್ಯಂಗ್ಯವಾಡಿದರು. ಅವರು ತಾಲೂಕಿನ ನೀರಲಕಟ್ಟಿ, ತಡಕೋಡ ಹಾಗೂ ಗರಗ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. ಸಭೆ ಸಮಾರಂಭಗಳಲ್ಲಿ ಮಾತೆತ್ತಿದರೆ ಸಾಕು ನನ್ನನ್ನು ಗುಂಡಾ ಎನ್ನುತ್ತಿರುವ ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರ ನಡೆ ಸರಿಯಾದುದಲ್ಲ. ನನ್ನದು ಗುಂಡಾ ಪ್ರವೃತ್ತಿ ಎನ್ನುವುದಿದ್ದರೆ ಆ ಕುರಿತು ಅವರು ದಾಖಲೆ ಸಮೇತ ತೋರಿಸಲಿ ಎಂದು ಸವಾಲ್ ಹಾಕಿದರು. ನನ್ನ ಕ್ಷೇತ್ರದ ಜನತೆಗೆ ಅನ್ಯಾಯವಾದರೆ ನಾನು ಸಹಿಸುವುದಿಲ್ಲ. ನಾನು ಒಳ್ಳೆಯವರ ಪಾಲಿಗೆ ಒಳ್ಳೆಯವನಾಗಿದ್ದು, ಅನ್ಯಾಯ ಮಾಡುವವರ ವಿರುದ್ಧ ನನ್ನ ಹೋರಾಟ ಸದಾಕಾಲ ಇದ್ದೇ ಇರುತ್ತದೆ ಎಂದು ತಿರುಗೇಟು ನೀಡಿದರು. ಬಿಜೆಪಿ ನಾಯಕರು ಅಧಿಕಾರದ ಆಸೆಗಾಗಿ ಮತ್ತು ಲಿಂಗಾಯತರ ಮತಗಳಿಕೆಗಾಗಿ ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ನೇಮಕ ಮಾಡಿದ್ದಾರೆ ಹೊರತು ನಿಜವಾಗಿಯೂ ಅಲ್ಲ. ಅಷ್ಟಕ್ಕೂ ಅವರು ಜೈಲು ಸೇರಲು ಅವರೇ ನಂಬಿಕೆಯಿಟ್ಟಿದ್ದ ನಾಯಕರೆ ಹೊರತು ಬೇರೆ ಯಾರು ಕಾರಣವಲ್ಲ. ನನ್ನನ್ನು ಗುಂಡಾ ಎನ್ನುತ್ತಿರುವ ಬಿಜೆಪಿ ನಾಯಕರು ಇದೀಗ ಇದೇ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಅಮೃತ ದೇಸಾಯಿ ಜೊತೆಗೆ ಪ್ರಚಾರ ಕಾರ್ಯದಲ್ಲಿರುವ ನಿಜವಾದ ಗುಂಡಾಗಳನ್ನು ಮರೆತಂತಿದೆ ಎಂದು ತರಾಟೆ ತೆಗೆದು ಕೊಂಡರು. ರೌಡಿ ಶೀಟರಗಳನ್ನು ಬೆನ್ನು ಹಚ್ಚಿಕೊಂಡು ತಿರಾಗುಡುತ್ತಿದ್ದಾರಲ್ಲ. ಒಂದು ಸಾರಿ ಅವರ ಹಿಂದಿನ ಇತಿಹಾಸವನ್ನು ತೆಗೆದು ನೋಡಿ ಎಂದ ಅವರು ಸುಳ್ಳನ್ನೆ ತಮ್ಮ ಮನೆ ದೇವರನ್ನಾಗಿಸಿಕೊಂಡಿರುವ ಈ ಭಾಗದ ಸಂಸದ ಜೋಶಿಯವರು ಚುನಾವಣೆಯ ಸಂದರ್ಭದಲ್ಲಿ ಜಾತಿ ಜಾತಿಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದು ತಮ್ಮ ೧೪ ವರ್ಷಗಳ ಅವಧಿಯಲ್ಲಿ ತಮ್ಮ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆಂಬುದನ್ನು ಸ್ಪಷ್ಟ ಪಡಿಸಲಿ. ನಮ್ಮದೇ ರಾಜ್ಯ ಸರ್ಕಾರದ ಕೆಲವು ಮಹತ್ತರ ಯೋಜನೆಗಳನ್ನು ಕೇಂದ್ರ ಸರ್ಕಾರದ್ದು ಎಂದು ಸುಳ್ಳು ಹೇಳುತ್ತ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಭಾಗದ ಜನರು ಪ್ರಜ್ಣಾವಂತರಿದ್ದು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇನ್ನಾದರೂ ಬೆಂಕಿ ಹಚ್ಚುವ ಕೆಲಸವನ್ನು ಬಿಟ್ಟು ಅಭಿವೃದ್ದಿ ಕಡೆ ಗಮನ ಹರಿಸುವುದು ಒಳ್ಳೆಯದು.ಇಲ್ಲವಾದಲ್ಲಿ ಮುಂಬರುವ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆಂದು ಎಚ್ಚರಿಸಿದರು. ಬಳಿಕ ಗರಗ್ ಗ್ರಾಮದಲ್ಲಿ ಭರ್ಜರಿ ರೋಡ್ ಶೋ ನಡೆಸಿ, ಮತಯಾಚಿಸಿದರು.