ಕೃಷಿ ವಿಶ್ವವಿದ್ಯಾಲಯದಲ್ಲಿ ಮತ ಎಣಿಕೆ
Date : 2018-05-09 SHARE
ಧಾರವಾಡ : ಕೃಷಿ ವಿಶ್ವವಿದ್ಯಾಲಯದಲ್ಲಿ ಜಿಲ್ಲೆಯ ಎಲ್ಲ ಏಳೂ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು. ಈಗಾಗಲೇ ಮತ ಎಣಿಕೆ ಕೇಂದ್ರ ಸಜ್ಜುಗೊಂಡಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆಗಾಗಿ ಪ್ರತ್ಯೇಕ ಕೊಠಡಿಗಳನ್ನು ನಿಗದಿಪಡಿಸಲಾಗಿದೆ. ಅಲ್ಲದೆ ಇವಿಎಂ ಸ್ಟ್ರಾಂಗ್ ರೂಮ್ಗಳನ್ನು ಸ್ಥಾಪಿಸಲಾಗಿದೆ. ಮತ ಎಣಿಕಾ ಕೇಂದ್ರದಲ್ಲಿ ಮೀಡಿಯಾ ಸೆಂಟರ್, ಪೊಲೀಸ್ ವೇಟಿಂಗ್ ರೂಮ್, ವೀಕ್ಷಕರ ಕೊಠಡಿ ಹಾಗೂ ಡಿ.ಇ.ಓ ರೂಮ್ಗಳನ್ನು ಸಹ ನಿಗದಿಪಡಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಮತ ಎಣಿಕೆಗಾಗಿ ೧೪ ಟೇಬಲ್ನಂತೆ ವ್ಯವಸ್ಥೆ ಮಾಡಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ಅಂದಾಜು ೧೫ ರಿಂದ ೨೦ ಸುತ್ತುಗಳಲ್ಲಿ ನಡೆಯಲಿದೆ. ಮತ ಎಣಿಕೆ ಕಾರ್ಯವು ಸುಗಮವಾಗಿ ನಡೆಯಬೇಕಾಗಿದ್ದು, ಮತ ಎಣಿಕಾ ಕಾರ್ಯಕ್ಕಾಗಿ ನಿಯೋಜಿಸಲಾದ ಅಧಿಕಾರಿಗಳು ಮೇ. ೧೫ ರಂದು ಬೆಳಿಗ್ಗೆ ೫.೩೦ ಗಂಟೆಗೆ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಿ, ವರದಿ ಮಾಡಿಕೊಳ್ಳಬೇಕು. ತಮಗೆ ಹಂಚಿಕೆಯಾದ ವಿಧಾನಸಭಾ ಕ್ಷೇತ್ರ ಹಾಗೂ ಟೇಬಲ್ ಸಂಖ್ಯೆಯನ್ನು ತಿಳಿದುಕೊಳ್ಳಬೇಕು. ಮತಯಂತ್ರಗಳ ಪ್ರಕಾರ ದಾಖಲಾದ ಮತಗಳ ಸಂಖ್ಯೆ, ಚಲಾವಣೆಯಾದ ಮತಗಳು ಇತ್ಯಾದಿಗಳ ವಿವರವನ್ನು ಪಡೆಯಬೇಕು. ಮೊದಲಿಗೆ ಬೆಳಿಗ್ಗೆ ೦೮ ಗಂಟೆಗೆ ಸರಿಯಾಗಿ ಪೋಸ್ಟಲ್ ಮತಗಳ ಎಣಿಕೆಯನ್ನು ಕ್ಷೇತ್ರ ಚುನಾವಣಾಧಿಕಾರಿಗಳ ಟೇಬಲ್ನಲ್ಲಿ ಪ್ರಾರಂಭಗೊಂಡು, ಉಳಿದಂತೆ ಮತಗಟ್ಟೆಗಳಲ್ಲಿ ಇವಿಎಂ ಮೂಲಕ ದಾಖಲಾದ ಮತಗಳ ಎಣಿಕೆ ಕಾರ್ಯ ಪ್ರಾರಂಭವಾಗುತ್ತದೆ. ಮತ ಎಣಿಕೆ ಕಾರ್ಯದಲ್ಲಿ ಚುನಾವಣಾ ಆಯೋಗ ನೀಡಿರುವ ಮಾರ್ಗಸೂಚಿಯನ್ನ ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವುದೇ ತೊಂದರೆ ಉಂಟಾದಲ್ಲಿ ಕೂಡಲೇ ಅಧಿಕಾರಿಗಳ ಗಮನಕ್ಕೆ ತರಬೇಕು .ಅಭ್ಯರ್ಥಿಗಳ ಭವಿಷ್ಯವನ್ನು ಅಂತಿಮವಾಗಿ ಘೋಷಿಸುವ ಈ ಮಹತ್ವದ ಕಾರ್ಯದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ನಿಷ್ಪಕ್ಷಪಾತವಾಗಿ, ನ್ಯಾಯಯುತವಾಗಿ ಮತ್ತು ಪಾರದರ್ಶಕವಾಗಿ ಕೆಲಸ ಮಾಡಬೇಕು. ಅಭ್ಯರ್ಥಿಗಳಿಗೆ ಅವರ ಪ್ರತಿನಿಧಿಗಳಿಗೆ ಒಟ್ಟಾರೆ ಪ್ರಕ್ರಿಯೆಯಲ್ಲಿ ಸಂಪೂರ್ಣ ವಿಶ್ವಾಸ ಸಿಗುವಂತೆ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ಹೇಳಿದರು. ಉಪವಿಭಾಗಾಧಿಕಾರಿ ಪಿ.ಜಯಮಾಧವ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಪ್ರೊಬೆಷನರಿ ಉಪವಿಭಾಗಾಧಿಕಾರಿ ಶೇಖರ್ ಉಪಸ್ಥಿತರಿದ್ದರು.