ಕಾಂಗ್ರೆಸ್ ಅಭ್ಯರ್ಥಿ ಬಂಧಿಸಲು ಬಿಜೆಪಿ ಒತ್ತಾಯ
Date : 2018-05-10 SHARE
ಧಾರವಾಡ: ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಇಸ್ಮಾಯಿಲ್ ತಮಟಗಾರ ಅವರನ್ನು ಬಂಧಿಸಬೇಕು ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಮಾ. ನಾಗರಾಜ ಒತ್ತಾಯಿಸಿದರು. ಅವರು ಗುರುವಾರ ಸಂಜೆ ನಗರದಲ್ಲಿ ಪತ್ರಿಕಾಗೋಷ್ಠೀಯನ್ನುದ್ದೇಶಿಸಿ ಮಾತನಾಡಿ, ಈ ಕುರಿತು ಈಗಾಗಲೇ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದ್ದು, ಅವರ ಮೇಲೆ ಸಾಕಷ್ಟು ಪ್ರಕರಣಗಳಿವೆ. ಅಲ್ಲದೆ, ಇತ್ತೀಚೆಗೆಷ್ಟೇ ಅವರು ಜೆಡಿಯುನಿಂದ ಸ್ಪರ್ಧೆ ಮಾಡಿದ ಮುಸ್ಲಿಂ ಅಭ್ಯರ್ಥಿ ಮೇಲೆಯೇ ಹಲ್ಲೆ ಮಾಡಿ ಸ್ಪರ್ಧೆಯಿಂದ ಹಿಂದೆ ಸರಿಯುವಂತೆಮಾಡಿದ್ದಾರೆ ಎಂದು ಆರೋಪಿಸಿದರು. ಈ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಹಲವು ದಿನಗಳು ಕಳೆದರೂ ಈವರೆಗೆ ಪೊಲೀಸರು ಅವರನ್ನು ಬಂಧಿಸಿಲ್ಲ. ಅದು ಜಾಮೀನು ರಹಿತ ಪ್ರಕರಣವಾಗಿದೆ ಎಂದ ಅವರು ಇಂತಹ ಅಭ್ಯರ್ಥಿ ಸುಸಂಸ್ಕೃತ ಧಾರವಾಡ ನಗರಕ್ಕೆ ಬೇಕೆ ಎಂದುಪ್ರಶ್ನಿಸಿದರು. ಅಭಿವೃದ್ಧಿಯ ಚಿಂತಕ ಮತ್ತು ಕ್ರಿಯಾಶೀಲ ವ್ಯಕ್ತಿಯಾಗಿರುವ ಅರವಿಂದ ಬೆಲ್ಲದ ರಾಜ್ಯದಲ್ಲಿಯೇ ಮಾದರಿ ಶಾಸಕರಾಗಿದ್ದಾರೆ. ಅಂತಹ ವ್ಯಕ್ತಿಗಳನ್ನು ಆಯ್ಕೆ ಮಾಡುವ ಮೂಲಕ ಹೆಚ್ಚಿನ ಅಭಿವೃದ್ಧಿಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು. ಮತದಾನದ ದಿನದಂದು ನಗರದ ಸೂಕ್ಷ್ಮ ಮತಗಟ್ಟೆಗಳಲ್ಲಿ ಮತದಾರರನ್ನು ಮತ್ತು ಅಧಿಕಾರಿಗಳನ್ನು ಹೆದರಿಸುವ ಆತಂಕ ಎಲ್ಲರಲ್ಲಿ ಮನೆ ಮಾಡಿದ್ದು, ಅಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಒದಗಿಸಬೇಕು. ಮತಗಟ್ಟೆ ಬಳಿ ಗೂಂಡಾ ಶಕ್ತಿಗಳು ಉದ್ದೇಶಪೂರ್ವಕವಾಗಿ ಸರತಿ ಸಾಲು ಹೆಚ್ಚಿಸಲು ಬೂತ ಬಳಿ ನಿಲ್ಲುವ ಸಂಭವವಿದ್ದು, ಸಂಬಂಧಪಡದ ಮತ್ತು ಮತದಾನ ಮಾಡಿದ ಜನರನ್ನು ಮತಗಟ್ಟೆಯಿಂದ ತಕ್ಷಣ ಹೊರಗಡೆ ಕಳುಹಿಸಬೇಕು ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯರಾದ ಶಿವು ಹಿರೇಮಠ, ಸಂಜಯ ಕಪಟಕರ, ಬಸವರಾಜ ಮುತ್ತಳ್ಳಿ, ಹುಡಾ ಹಿಂದಿನ ಅಧ್ಯಕ್ಷ ಲಿಂಗರಾಜ ಪಾಟೀಲ, ಪ್ರಕಾಶ ಗೋಡಬೊಲೆ, ಮೋಹನ ರಾಮದುರ್ಗ ಇದ್ದರು.