ಜೆಡಿಎಸ್ ಅಭ್ಯರ್ಥಿ ಕೋನರಡ್ಡಿಗೆ ಅಭೂತಪೂರ್ವ ಸ್ವಾಗತ
Date : 2018-05-06 SHARE
ಹುಬ್ಬಳ್ಳಿ : ನವಲಗುಂದ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ಆಗಿರುವ ಶಾಸಕ ಎನ್. ಹೆಚ್. ಕೋನರಡ್ಡಿ ಅವರಿಗೆ ಶನಿವಾರ ರಾತ್ರಿ ಅಭೂತಪೂರ್ವ ಸ್ವಾಗತ ಕೋರಲಾಯಿತು. ಗ್ರಾಮದ ಕ್ರಾಸ್ ನಲ್ಲಿ ಆರತಿ ಬೆಳಗಿ ಸ್ವಾಗತ ಕೋರಿದ ಗ್ರಾಮಸ್ಥರು, ಝಾಂಜ್ , ಭಜನೆ ಮೂಲಕ ಗ್ರಾಮದಲ್ಲಿ ರೋಡ್ ಶೋ ನಡೆಸಿದರು. ಬಳಿಕ ಮಾತನಾಡಿದ ಶಾಸಕ ಎನ್.ಹೆಚ್. ಕೋನರಡ್ಡಿ, ನಿರೀಕ್ಷೆಯಂತೆ ಬಿಜೆಪಿ ಪ್ರಣಾಳಿಕೆ ಠುಸ್ ಆಗಿದೆ. ಕೇವಲ ಒಂದು ಲಕ್ಷ ಸಾಲ ಮನ್ನಾ ಮಾಡುವುದಾಗಿ ಬಿಜೆಪಿ ಹೇಳಿದೆ. ಆದರೆ ನಾವು ಮೂರು ವರ್ಷದ ಹಿಂದೆಯೇ ರೈತರ ಎಲ್ಲ ಕೃಷಿ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದೇವೆ. ಬಿಜೆಪಿಯವರಿಗೆ ಈಗ ಎಚ್ಚರವಾಗಿದೆ ಎಂದು ಲೇವಡಿ ಮಾಡಿದರು. ರೈತರ 52 ಸಾವಿರ ಕೋಟಿ ಸಾಲಮನ್ನಾ ಮಾಡುವ ಜೆಡಿಎಸ್ ಬೇಕೋ ಅಥವಾ 10 ಸಾವಿರ ಕೋಟಿ ಸಾಲ ಮನ್ನಾ ಮಾಡುವ ಬಿಜೆಪಿ ಬೇಕೋ ಎಂಬುದನ್ನು ನಿರ್ಧರಿಸಿ ಎಂದ ಅವರ ನಾವು ಎಲ್ಲ ಸಾಲ ಕುಲ್ಲಾ ಮಾಡ್ತಿವಿ, ಟ್ಯಾಕ್ಟರ್ ಸಾಲ, ಬೆಳೆಸಾಲ, ಕೃಷಿಗಾಗಿ ತೆಗೆದುಕೊಂಡ ಎಷ್ಟೇ ಸಾಲ ಇರಲಿ ಯಾವುದಕ್ಕೂ ಹೆದರುವ ಅಗತ್ಯವಿಲ್ಲ ಎಂದು ಅಭಯ ನೀಡಿದರು. ಸಾಲಮನ್ನಾ ಮಾಡುವ ಕುರಿತು ರೈತರ ಅಭಿಪ್ರಾಯ ಸಂಗ್ರಹಿಸಲು ಹೊರಟರೆ ಬಿಜೆಪಿಯವರು ಹೆದರಿ ರಾಜಕೀಯ ಪ್ರೇರಿತ ದೂರು ನೀಡಿದ್ದಾರೆ. ಇದಕ್ಕೆ ರೈತರು ಹೆದರುವ ಅಗತ್ಯವಿಲ್ಲ. ಕುಮಾರಸ್ವಾಮಿ ಸಿಎಂ ಆದ ೨೪ ಗಂಟೆಗಳಲ್ಲಿ ಎಲ್ಲ ರೈತರ, ನೇಕಾರರ, ಮಹಿಳಾ ಸ್ರ್ತೀಸಹಾಯ ಸಂಘಗಳ ಸಾಲಮನ್ನಾ ಮಾಡುವ ಜೊತೆಗೆ ಗಭೀರ್ಣಿ ಮಹಿಳೆಯರಿಗೆ ಹೆರಿಗೆ ಭತ್ಯೆ ೩೬ ಸಾವಿರ, ನೀಡಲಾಗುವುದು ಎಂದರು. ಎಲ್ಲ ದೇವರ ಆಶೀರ್ವಾದದಿಂದಾಗಿ ಸಕಾಲಕ್ಕೆ ಮಳೆ ಬೆಳೆ ಆಗಬೇಕು, ಹುಬ್ಬಳ್ಳಿ ಧಾರವಾಡ ಮಾದರಿಯಲ್ಲಿ ನವಲಗುಂದ ವಿಧಾನ ಸಭಾಕ್ಷೇತ್ರದ ಎಲ್ಲ ಹಳ್ಳಿಗಳನ್ನು ಅಭಿವೃದ್ಧಿ ಮಾಡಲಾಗುವುದು. ಈಗಾಗಲೇ ಇಂಗಳಹಳ್ಳಿ ಶಿರಗುಪ್ಪಿಯಲ್ಲಿ ಎಲ್ಲಜಾತಿ ಜನಾಂಗದವರಿಗೆ ಸಮುದಾಯ ಭವನ, ಮಲಪ್ರಭಾ ಕಾಲುವೆ ಆಧುನೀಕರಣಕ್ಕಾಗಿ ಮೂವತ್ತು ವರ್ಷ ಹೋರಾಟ ನಡೆಸಿ ಕೊನೆಗೂ ಸಾವಿರಾರು ಕೋಟಿ ಅನುದಾನ ತಂದು ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಅದೇ ರೀತಿ ಮಂಟೂರ ಕಾಲುವೆಗೆ ಮೂವತ್ತು ಕೋಟಿ, ಶಿರಗುಪ್ಪಿ- ಇಂಗಳಹಳ್ಳಿ ರಸ್ತೆ ಅಭಿವೃದ್ಧಿ ಮಾಡಲಾಗಿದೆ ಎಂದು ವಿವರಿಸಿದರು. ಜೆಡಿಎಸನ ಯುವಪಡೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ, ಕೆಲಸ ಮಾಡಿ, ನಾನು ನಿಮ್ಮ ಋಣ ತೀರಿಸುವ ಕೆಲಸ ಮಾಡುತ್ತೇನೆ. ಬಿಜೆಪಿಯವರು ದೊಡ್ಡ ಭ್ರಮೆಯಲ್ಲಿದ್ದಾರೆ. ಅವರ ಬಳಿ ದುಡ್ಡು ಇರಬಹುದು ಆದರೆ ನಮ್ಮದು ಜನ ಶಕ್ತಿ ಇದೆ. ಆ ಜನಶಕ್ತಿ ಮುಂದೆ ಯಾವ ಶಕ್ತಿಯೂ ತಡಿಯುವುದಿಲ್ಲ ಎಂದರು. ಅಣ್ಣಿಗೇರಿ ಹಾಗೂ ನವಲಗುಂದ ನಲ್ಲಿ ಜಮೀರ್ ಅಹಮ್ಮದ್ ಅವರ ಪ್ರಚಾರಕ್ಕೆ ಮುಸ್ಲಿಂ ಬಾಂಧವರೇ ಅಡ್ಡಿ ಪಡಿಸಿ, ಜೆಡಿಎಸ್ ಪರ ಒಲವು ತೋರಿಸಿರುವುದು ನೋಡಿದರೆ, ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸನ ಆಟ ನಡೆಯುವುದಿಲ್ಲ ಎಂಬುದು ಸಾಬೀತಾಗಿದೆ. ಬಿಜೆಪಿ ಟೀಕೆಗೆ ತಲೆ ಕೆಡಿಸಿಕೊಳ್ಳಬೇಡಿ, ನಿಮ್ಮ ಸೇವಕ ಇಡೀ ರಾಜ್ಯಕ್ಕೆ ಮಾದರಿ ಕ್ಷೇತ್ರ ನಿರ್ಮಾಣ ಮಾಡುವ ಜವಬ್ದಾರಿ ನನ್ನದು ಎಂದರು. ಮೇ. 15ರ ಫಲಿತಾಂಶ ಜೆಡಿಎಸ್ ಪರವಾಗಿ ಬರಲಿದೆ. ಅದು ಜನರ ಗೆಲುವು ಹೊರತು ನನ್ನ ಗೆಲುವು ಅಲ್ಲ. ಎಲ್ಲ ಧರ್ಮದ ಜನರ ಸಹಾಯ, ಸಹಕಾರ, ಬೆಂಬಲ, ಹಿರಿಯರು, ಯುವಕರು, ಮಹಿಳೆಯರು ಸಂಪೂರ್ಣ ಆಶೀರ್ವಾದ ನೀಡಬೇಕು ಎಂದು ಮನವಿಮಾಡಿದರು. ಈ ಸಂದರ್ಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷರಾದ ಶಿವಣ್ಣ ಹುಬ್ಬಳ್ಳಿ, ವೀರಣ್ಣ ನೀರಲಗಿ, ಎಂ.ಎಸ್. ರೋಣದ, ಶಿವಪುತ್ರಯ್ಯಾ ಹೊಸಮಠ, ಮಲ್ಲಪ್ಪಾ ಅಣ್ಣಿಗೆರಿ, ಚನ್ನಬಸಪ್ಪಾ ನೆಲಗುಡ್ಡ, ಎಲ್ಲನಗೌಡ ಕಾಶಪ್ಪಗೌಡರ, ಶರಣು ದೊಡ್ಡಲಿಂಗನಗೌಡರ್, ಬಸನಗೌಡ ಕಾಶಪ್ಪಗೌಡರ್. ಗುರನಗೌಡ ಬೆಳವಟಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.