ಮಹದಾಯಿ ಮುಂದಿಟ್ಟುಕೊಂಡು ಬಿಜೆಪಿ ರಾಜಕೀಯ : ಶಾಸಕ ಕೋನರಡ್ಡಿ ಆರೋಪ
Date : 2018-05-07 SHARE
ನವಲಗುಂದ : ಮಹದಾಯಿ, ಕಳಸಾ-ಬಂಡೂರಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಅದನ್ನು ಪ್ರಾಮಾಣಿಕವಾಗಿ ಬಗೆಹರಿಸಬೇಕಾಗಿದ್ದ ಕೇಂದ್ರದ ಬಿಜೆಪಿ ಸರಕಾರ ಆ ವಿಷಯವನ್ನು ಉದ್ದೇಶ ಪೂರ್ವಕವಾಗಿ ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದೆ ಎಂದು ನವಲಗುಂದ ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಎನ್.ಹೆಚ್. ಕೋನರಡ್ಡಿ ಆಪಾದಿಸಿದರು. ಅವರು ಭಾನುವಾರ ನವಲಗುಂದ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ನವಲಗುಂಮದ ಪಡೇಸೂರ, ಶಾನವಾಡ, ಹಾಲ್ ಕುಸುಗಲ್, ತಿರ್ಲಾಪುರ ಗ್ರಾಮದಲ್ಲಿ ಜೆಡಿಎಸ್ ಪರ ಬಿರುಸಿನ ಪರ ಪ್ರಚಾರ ನಡೆಸಿ ಮಾತನಾಡಿದರು. ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಗೋವಾ ಸಿಎಂ ಮನೋಹರ ಪರಿಕರ್ ಬರೆದ ಪತ್ರವನ್ನು ಹುಬ್ಬಳ್ಳಿಯ ಬಿಜೆಪಿಯ ಸಮಾವೇಶದಲ್ಲಿ ಓದಿ ಜನರ ದಾರಿ ತಪ್ಪಿಸಿದ ಹಾಗೆಯೇ ಇದೀಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸವದತ್ತಿಯಲ್ಲಿ ಬಿಜೆಪಿ ಸರಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಆರು ತಿಂಗಳಲ್ಲಿ ಬಗೆಹರಿಸುವುದಾಗಿ ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಕೇಂದ್ರ ಸರ್ಕಾರ ಅದರಲ್ಲೂ ಪ್ರಧಾನಿ ನರೇಂದ್ರ ಮೋದಿಯವರು ಮನಸ್ಸು ಮಾಡಿದರೆ ಮೂರು ರಾಜ್ಯಗಳ ಸಿಎಂ ಸಭೆ ಕರೆದು ಒಂದು ದಿನದಲ್ಲಿ ಈ ಸಮಸ್ಯೆಯನ್ನು ಮಾತುಕತೆ ಮೂಲಕ ನ್ಯಾಯಾಧೀಕರಣದ ಹೊರಗಡೆಯೇ ಬಗೆಹರಿಸಬಹುದಾಗಿತ್ತು. ಆದರೆ ಅದನ್ನು ಮಾಡದೆ, ಇದೀಗ ಚುನಾವಣೆ ಹೊಸ್ತಿಲಿನಲ್ಲಿ ಈ ರೀತಿ ಗಿಮಿಕ್ ಮಾಡುವುದು ಸರಿಯಲ್ಲ. ಹುಬ್ಬಳ್ಳಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೂರುವರ್ಷ ಯಾಕೆ ಬಾಯಿ ಬಿಡಲಿಲ್ಲ. ಗೋವಾ ಹಾಗೂ ಮಹಾರಾಷ್ಟ್ರದಲ್ಲಿ ನಿಮ್ಮದೇ ಬಿಜೆಪಿ ಸರಕಾರ ಅಧಿಕಾರದಲ್ಲಿದೆ. ಕೇಂದ್ರದಲ್ಲಿ ನೀವೆ ಪ್ರಧಾನಿ ಇದ್ದೀರಿ ಯಾಕ ಬಾಯಿ ಬಿಡಲಿಲ್ಲ. ಈಗ ಚುನಾವಣೆಯಲ್ಲಿ ಮಾತನಾಡುತ್ತಿರುವುದು ನಿಮಗೆ ಶೋಭೆ ನೀಡುತ್ತದೆಯೇ ಎಂದು ಪ್ರಶ್ನಿಸಿದರು. ಕ್ಷೇತ್ರದ ಜನತೆ ತಾವೇ ಕೋನರಡ್ಡಿ, ಕುಮಾರಸ್ವಾಮಿ ಆಗ್ಯಾರ, ಎರಡ ಸಲ ಸೋತು ಮೂರನೇ ಸಲ ಗೆದ್ದಿನಿ, ಕ್ಷೇತ್ರದಲ್ಲಿ ಈ ಬಾರಿ ಹದಿನೈದು ಸಾವಿರ ಜನ ಜೆಡಿಎಸ್ ಪಕ್ಷ ಸೇರ್ಪಡೆ ಆದರೆ ಐದು ಸಾವಿರ ಮಹಿಳೆಯರು ಪಕ್ಷಕ್ಕೆ ಬಂದಿದ್ದಾರೆ. ನವಲಗುಂದ ರೈತ ಬಂಡಾಯದ ನೆಲ. ಬಿಜೆಪಿ ಪ್ರಣಾಳಿಕೆ ನೋಡಿ ಜೆಡಿಎಸ್ ನೋಡಿ ವ್ಯತ್ಯಾಸ ಅರಿತುಕೊಂಡು ಮತದಾನ ಮಾಡಿ ಎಂದು ಮನವಿ ಮಾಡಿದರು. ಬಿಜೆಪಿಯವರು ಒಂದು ನೂರು ಸುಳ್ಳು ಹೇಳಿ ಒಂದು ಸತ್ಯ ಮಾಡೋರು ಬಿಜೆಪಿಯವರು ನವಲಗುಂದ ಅಭಿವೃದ್ಧೀ ಕಂಡು ಹೊಟ್ಟೆ ಕಿಚ್ಚು ಮಾಡಿಕೊಳ್ಳುತ್ತಿದ್ದಾರೆ. ಅವರದ್ದು ದುಡ್ಡು ನಮ್ಮದು ಜನಶಕ್ತಿ ಇವರೆಡರ ಪರೀಕ್ಷೆ ಇದೆ. ಹೀಗಾಗಿ ಜನತೆಗೆ ಕೈ ಮುಗಿದು ಪ್ರಾರ್ಥನೆ ಮಾಡ್ತನಿ ರೈತರ ಕಣ್ಣೀರು ಒರೆಸಿದವ ಕುಮಾರಸ್ವಾಮಿ, ಎಲ್ಲ ಸಮಾಜದ ಜನ ಮತ ನೀಡುವ ಮೂಲಕ ಇನ್ನೊಮ್ಮೇ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು. ಪಡೇಸುರ, ಶಾನವಾಡ, ಹಾಲ್ ಕುಸುಗಲ್ ಹಾಗೂ ತಿರ್ಲಾಪುರ ಗ್ರಾಮದಲ್ಲಿ ಜೆಡಿಎಸ್ ಕಲರವ ಕಂಡು ಬಂತು. ನವಲಗುಂದ ಕ್ಷೇತ್ರದಲ್ಲೆಡೆ ಜೆಡಿಎಸ್ ಅಭ್ಯರ್ಥಿ ಎನ್.ಹೆಚ್. ಕೋನರಡ್ಡಿ ಅವರಿಗೆ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ. ತಿರ್ಲಾಪುರ ಗ್ರಾಮದ ಜನತೆ ಶಾಸಕ ಎನ್.ಹೆಚ್. ಕೋನರಡ್ಡಿ ಅವರಿಗೆ ಅದ್ಧೂರಿ ಸ್ವಾಗತ ಕೊರಿದರು. ತಾಯಿಂದಿರು ಆರತಿ ಬೆಳಗಿ ಅಭೂತಪೂರ್ವ ಸ್ವಾಗತ ನೀಡಿದರು. ಈ ಸಂದರ್ಭದಲ್ಲಿ ರಮೇಶ ನವಲಗುಂದ, ಬಿ.ಸಿ. ಹೆಬಸೂರ, ಬಸವರಾಜ ಅಂಗಡಿ, ಶೇಕಯ್ಯ ಹೊಸಮಠ, ಫಕೀರಯ್ಯ ದೊಡಮನಿ, ನಿಂಗಪ್ಪ ಹಳ್ಳದ, ಯಲ್ಲಪ್ಪ ಹಳ್ಯಾಳ, ಚಂದ್ರಗೌಡ ಪಾಟೀಲ, ಸಿ.ಡಿ. ಅಣ್ಣಿಗೇರಿ, ಎಸ್.ಜಿ. ಲೋಕಾಪುರಮಠ, ಕೆ.ಆರ್. ಪಾಟೀಲ, ತಿರ್ಲಾಪುರ ಗ್ರಾಪಂ ಅಧ್ಯಕ್ಷ ಬಿ.ವಿ. ಅಣ್ಣಿಗೇರಿ, ಸಿದ್ದಲಿಂಗಪ್ಪ ಮದ್ನೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.