ಮತದಾನಕ್ಕೆ ಸಾಕ್ಷಿಯಾದ ಯುವ ಜೋಡಿಗಳು, ಮೊದಲ ಮತದಾನ ಮಾಡಿದ ಯುವಕ,ಯುವತಿಯರು
Date : 2018-05-12 SHARE
ಬೆಂಗಳೂರು : ರಾಜ್ಯ ವಿಧಾನ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಶನಿವಾರ ನಡೆದ ಮತದಾನಕ್ಕೆ ರಾಜ್ಯಾದ್ಯಂತ ವಿಶಿಷ್ಟ ಘಟನೆಗಳು ಸಾಕ್ಷಿಯಾದವು. ಅನೇಕರು ಮದುವೆ ಮನೆಯಿಂದ ಬಂದು ಮತದಾನ ಮಾಡಿದರೆ, ಕೆಲವರು ಸೂತಕದ ನಡುವೆಯೂ ತಮ್ಮ ಹಕ್ಕು ಚಲಾಯಿಸಿದ್ದಾರೆ. ಯುವಕ, ಯುವತಿಯರು ಮೊದಲ ಬಾರಿಗೆ ತಮ್ಮ ಮತ ಚಲಾವಣೆ ಮಾಡಿದರೆ, ಅನೇಕ ಹಿರಿಯ ನಾಗರಿಕರು ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಇತರರ ಸಹಾಯದಿಂದ ತಮ್ಮ ವಯಸ್ಸುನ್ನು ಮರೆತು ಮತಗಟ್ಟೆಗಳತ್ತ ಹೆಜ್ಜೆ ಹಾಕಿ ಹಕ್ಕು ಚಲಾಯಿಸಿದ್ದು ವಿಶೇಷವಾಗಿತ್ತು. ಧಾರವಾಡ ಕೆ. ಇ. ಬೋರ್ಡ ಶಾಲೆಯಲ್ಲಿ ಮದುಮಗಳೊಬ್ಬರು ಮದುವೆ ಮನೆಯಿಂದ ಬಂದು ಮತದಾನದಲ್ಲಿ ಪಾಲ್ಗೊಂಡರೆ ಹೆಬ್ಬಳ್ಳಿಯ ಇಬ್ಬರು ಸಹೋದರರು ಮದುವೆಯ ನಂತರ ಬಂದು ತಮ್ಮ ಹಕ್ಕನ್ನು ಚಲಾಯಿಸಿ ಎಲ್ಲರ ಗಮನ ಸೆಳೆದರು. ಅನೇಕ ಕಡೆ ಶತಾಯುಷಿಗಳು, ಶತಮಾನಕ್ಕೆ ಸಮೀಪಿಸುತ್ತಿರುವ ಹಲವರು ಮತಕೇಂದ್ರಗಳಿಗೆ ಬಂದು ಮತ ಚಲಾವಣೆ ಮಾಡಿದರು.