ಪಂಚಮಸಾಲಿ ಸ್ವಾಮೀಜಿ ನಡೆಗೆ ಬಿಜೆಪಿ ಆಕ್ರೋಶ
Date : 2018-05-11 SHARE
ಧಾರವಾಡ : ಸಚಿವ ವಿನಯ್ ಕುಲಕರ್ಣಿಗೆ ಮತ ಹಾಕುವಂತೆ ಕೂಡಲ ಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಮನವಿ ಮಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಮುಂದಾಳತ್ವ ವಹಸಿದ್ದ ಸಚಿವ ವಿನಯ್ ಕುಲಕರ್ಣಿ ಅವರು ರಾಷ್ಟ್ರೀಯ ಬಸವ ಸೇನೆಯ ಅಧ್ಯಕ್ಷರು ಹಾಗೂ ಪಂಚಮಸಾಲಿ ಸಮಾಜದ ಧುರೀಣರು ಆಗಿದ್ದಾರೆ. ಹೀಗಾಗಿ ಅವರನ್ನು ಈ ಬಾರಿ ಗೆಲ್ಲಿಸುವಂತೆ ಸಚಿವ ವಿನಯ ಕುಲಕರ್ಣಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಇದು ಬಿಜೆಪಿಯವರ ಕೆಂಗಣ್ಣಿಗೆ ಗುರಿಯಾಗಿದ್ದು, ಸ್ವಾಮೀಜಿ ನಡೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ವಿನಯ ಕುಲಕರ್ಣಿ ಅವರ ಪರ ವಕಾಲತ್ತು ವಹಿಸಿರುವುದನ್ನು ಬಿಜೆಪಿಯ ಮುಖಂಡರು ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಪ್ರಜಾಕಿರಣದೊಂದಿಗೆ ಮಾತನಾಡಿದ ಅವರು ಅವರೊಬ್ಬ ಸ್ವಯಂ ಘೋಷಿತ ಸ್ವಾಮಿಯಾಗಿದ್ದು, ಸಮಾಜದ ಜನರ ನಂಬಿಕೆ ಕಳೆದುಕೊಂಡಿರುವ ಅವರು ಕೆಲವರ ವಕ್ತಾರರಂತೆ ವರ್ತಿಸುತ್ತಿರುವುದು ಸರಿಯಲ್ಲ. ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಅವರು ಕೂಡ ಲಿಂಗಾಯತರಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರು ನಮ್ಮ ಲಿಂಗಾಯತ ಸಮಾಜದ ದೊಡ್ಡ ಆಸ್ತಿ. ಸ್ವಾಮೀಜಿಯಾದವರು ಧರ್ಮ ಕಾರ್ಯ ಮಾಡಬೇಕೆ ಹೊರೆತು ಇಂತಹ ರಾಜಕೀಯ ಕೆಲಸಕ್ಕೆ ಕೈ ಹಾಕಬಾರದು. ಅವರು ಕೂಡಲೇ ಇದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಅವರಿಗೆ ಪಂಚಮಸಾಲಿ ಸಮಾಜವು ಬರುವ ದಿನಗಳಲ್ಲಿ ಸರಿಯಾದ ಪಾಠ ಕಲಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.