೧೬೨೮ ಮತಗಟ್ಟೆಗೆ ೯೭೮೦ ಮತದಾನ ಸಿಬ್ಬಂದಿ ನಿಯೋಜನೆ
Date : 2018-05-11 SHARE
ಧಾರವಾಡ : ಕರ್ನಾಟಕದ ೧೫ನೇ ವಿಧಾನಸಭೆ ರಚನೆಗೆ ಮೇ ೧೨ರಂದು ಬೆಳಿಗ್ಗೆ ೭ ರಿಂದ ಸಂಜೆ ೬ ಗಂಟೆಯವರೆಗೆ ಮತದಾನ ನಡೆಯಲಿದೆ. ಧಾರವಾಡ ಜಿಲ್ಲೆಯ ೭ ವಿಧಾನಸಭಾ ಕ್ಷೇತ್ರಗಳಲ್ಲಿ ೧೪,೭೯,೪೫೦ ಮತದಾರರಿದ್ದು, ೧೬೨೮ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತದಾನಕ್ಕೆ ನಿಯೋಜನೆಗೊಂಡಿರುವ ೯೭೮೦ ಸಿಬ್ಬಂದಿ ಆಯಾ ವಿಧಾನಸಭಾ ಕ್ಷೇತ್ರದ ಕೇಂದ್ರಸ್ಥಾನಗಳ ಮಸ್ಟರಿಂಗ್ ಕೇಂದ್ರಗಳಿಂದ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿಪ್ಯಾಟ್ ಯಂತ್ರಗಳನ್ನು ತೆಗೆದುಕೊಂಡು ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿರುವ ಮತಗಟ್ಟೆಗಳಿಗೆ ತೆರಳಿದರು. ನವಲಗುಂದದ ಶಂಕರ ಕಲಾ ಮಹಾವಿದ್ಯಾಲಯ, ಕುಂದಗೋಳದ ಹರಭಟ್ಟ ಸಂಯುಕ್ತ ಪದವಿ ಪೂರ್ವ ಕಾಲೇಜು, ಧಾರವಾಡದ ಬಾಸೆಲ್ ಮಿಷನ್ ಆಂಗ್ಲ ಮಾಧ್ಯಮ ಶಾಲೆ ಹಾಗೂ ಆರ್ ಎಲ್ ಎಸ್ ಕಾಲೇಜು, ಕಲಘಟಗಿಯ ಸರಕಾರಿ ಕೇಂದ್ರಿಯ ಮಾದರಿಯ ಶಾಲೆ, ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆ ಹಾಗೂ ಮಹಿಳಾ ವಿದ್ಯಾಪೀಠ ಕಾಲೇಜುಗಳ ಆವರಣಗಳಲ್ಲಿ, ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಇಂದು ಬೆಳಿಗ್ಗೆಯೇ ಕರ್ತವ್ಯಕ್ಕೆ ವರದಿ ಮಾಡಿಕೊಂಡರು. ಜಿಲ್ಲೆಯ ಎಲ್ಲ ೭ ವಿಧಾನಸಭಾ ಕ್ಷೇತ್ರಗಳಿಗೆ ೧೯೮೧ ಕಂಟ್ರೋಲ್ ಯುನಿಟ್ಗಳು, ೨೫೪೦ ಬ್ಯಾಲೆಟ್ ಯುನಿಟ್ಗಳು ಹಾಗೂ ೨೦೨೭ ವಿವಿಪ್ಯಾಟ್ ಯಂತ್ರಗಳನ್ನು ಹಂಚಿಕೆ ಮಾಡಲಾಗಿದೆ. ೯೭೮೦ ಮತಗಟ್ಟೆ ಅಧ್ಯಕ್ಷಾಧಿಕಾರಿಗಳು, ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿಗಳು ಹಾಗೂ ಮತದಾನ ಅಧಿಕಾರಿಗಳನ್ನು ನೇಮಿಸಿ ತರಬೇತಿ ನೀಡಲಾಗಿದೆ.