ಮರು ಚುನಾವಣೆ ನಡೆಸಲು ಇಸ್ಮಾಯಿಲ್ ತಮಟಗಾರ ಒತ್ತಾಯ
Date : 2018-05-17 SHARE
ಧಾರವಾಡ: ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದಲ್ಲಿ ಫಲಿತಾಂಶ ಏರುಪೇರಾಗಿರುವ ಸಂಶಯವಿದ್ದು, ಈ ಹಿನ್ನೆಲೆಯಲ್ಲಿ ಮರು ಚುನಾವಣೆ ಮಾಡಬೇಕೆಂದು ಕಾಂಗ್ರೆಸ್ ಅಭ್ಯರ್ಥಿ ಇಸ್ಮಾಯಿಲ್ ತಮಟಗಾರ ಆಗ್ರಹಿಸಿದರು. ಅವರು ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕುರಿತು ನಿನ್ನೆ ಚುನಾವಣಾ ಆಯೋಗಕ್ಕೆ ಮನವಿ ಪತ್ರ ಸಲ್ಲಿಸಲಾಗಿದೆ ಎಂದರು. ಕ್ಷೇತ್ರದಲ್ಲಿ ತಮಗೆ ಮತ ನೀಡಿದ ಬಡಾವಣೆಗಳಲ್ಲಿನ ಮತ ಯಂತ್ರಗಳು ಮತ್ತು ವಿವಿ ಪ್ಯಾಟ್ಗಳಲ್ಲಿ ಹೊಂದಾಣಿಕೆ ಆಗದಿರುವುದು ಕಂಡು ಬಂದಿದೆ ಎಂದ ದೂರಿದ ಅವರು ಸರಳ ಮತ್ತು ಸಜ್ಜನ ವ್ಯಕ್ತಿ ಎಂದೇ ಹೆಸರುವಾಸಿಯಾಗಿರುವ ಅರವಿಂದ ಬೆಲ್ಲದ ಅವರು ಕೆಲವು ವ್ಯಕ್ತಿಗಳನ್ನು ಬಳಸಿಕೊಂಡು ತಮ್ಮ ತೇಜೋವಧೆ ಮಾಡುವ ಮೂಲಕ ಕ್ಷುಲ್ಲಕ ರಾಜಕಾರಣ ಮಾಡಿದ್ದಾರೆ ಎಂದು ಆರೋಪಿಸಿದರು. ಜೆಡಿಯು ಅಭ್ಯರ್ಥಿ ಜಾವೀದ ಬೆಳಗಾಂವಕರ ಮನೆಯ ಮೇಲೆ ತಾವಾಗಲಿ, ನಮ್ಮ ಬೆಂಬಲಿಗರಾಗಲಿ ಕಲ್ಲು ತೂರುವುದು ಅಥವಾ ಬೆದರಿಕೆ ಹಾಕಿರಲಿಲ್ಲ. ಆದಾಗ್ಯೂ ಜಾವೀದ ಬೆಳಗಾಂವಕರ ಮೂಲಕ ತಮ್ಮ ವಿರುದ್ಧ ದೂರು ದಾಖಲಿಸುವ ಕೆಲಸವನ್ನು ಅರವಿಂದ ಬೆಲ್ಲದ ಮಾಡಿದ್ದಾರೆ. ತಮ್ಮ ಮೇಲೆ ಯಾವುದೇ ಗಂಭೀರ ಆರೋಪದ ಪ್ರಕರಣಗಳಿಲ್ಲ. ಸಾರ್ವಜನಿಕ ಹೋರಾಟದಲ್ಲಿನ ಒಂದು ಪ್ರಕರಣದ ವಿಚಾರಣೆ ಹೈಕೋರ್ಟ್ನಲ್ಲಿದೆ. ಆದಾಗ್ಯೂ ನನ್ನನ್ನು ಅಪರಾಧಿ ಎನ್ನುವ ಮಟ್ಟಿಗೆ ಬೆಲ್ಲದ ಅವರು ಬಿಂಬಿಸಿದ್ದು ಸರಿಯಲ್ಲ. ಅಲ್ಲದೇ ಮತದಾರರ ಮೋಬೈಲ್ಗಳಿಗೆ ಬಿಜೆಪಿಯವರೇ ಸಂದೇಶ ರವಾನಿಸಿ ಜಾತಿ ರಾಜಕಾರಣ ಮಾಡುವ ಮಟ್ಟಿಗೆ ನನ್ನ ತೇಜೋವಧೆ ಮಾಡಿದ್ದಾರೆ. ಈ ಬಗ್ಗೆ ಪೊಲೀಸ್ ಆಯುಕ್ತರಿಗೂ ದೂರು ನೀಡಿದ್ದು, ತನಿಖೆಯಿಂದ ಸತ್ಯಾಸತ್ಯತೆ ಹೊರಬೀಳಲಿದೆ ಎಂದರು. ಜನರ ಒಡನಾಟ, ಅಭಿವೃದ್ಧಿ ಕಾರ್ಯ ಮತ್ತಿತರ ಅಂಶಗಳ ಆಧಾರದ ಮೇಲೆ ಚುನಾವಣಾ ರಾಜಕಾರಣ ನಡೆಯಬೇಕಿತ್ತು. ಆದರೆ ಬೆಲ್ಲದ ಅವರು ಜಾತಿ ರಾಜಕಾರಣ ಮಾಡುವ ಮುಖಾಂತರ ಗೆಲುವು ಸಾಧಿಸಿರುವುದು ಬೇಸರದ ಸಂಗತಿ ಎಂದರು. ಕ್ಷೇತ್ರದಲ್ಲಿ ಬಿಜೆಪಿ ಗಾಳಿ ಇದ್ದು, ತಾವು ಸೋಲುವುದು ಖಚಿತ ಎಂದು ತಿಳಿದಿತ್ತು. ಆದರೆ ಎಲೆಕ್ಟ್ರಾನಿಕ್ ಮತ ಯಂತ್ರಗಳು ಮತ್ತು ವಿವಿ ಪ್ಯಾಟ್ಗಳ ಹೊಂದಾಣಿಕೆಯಲ್ಲಿನ ಲೋಪ ಹಾಗೂ ಅರವಿಂದ ಬೆಲ್ಲದ ಅವರ ಜಾತಿ ರಾಜಕಾರಣ ಮತಗಳ ಅಂತರ ಹೆಚ್ಚಳಕ್ಕೆ ಕಾರಣವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ ದಾನಪ್ಪ ಕಬ್ಬೇರ, ಕೆಪಿಸಿಸಿ ಸದಸ್ಯ ರಾಬರ್ಟ್ ದದ್ದಾಪುರಿ, ಪಾಲಿಕೆ ಸದಸ್ಯ ಸುಭಾಸ ಶಿಂಧೆ, ಮುಖಂಡರಾದ ಆನಂದ ಮುಶಣ್ಣವರ, ಬುರಾನ ಗವಳಿ, ಗ್ರೇಗರಿ ಝೇವಿಯರ್, ನ್ಯಾಯವಾದಿ ಆರ್.ಎಂ.ಜಾವೀದ ಇದ್ದರು.