ಮೂರುಸಾವಿರ ವಿರಕ್ತಮಠಕ್ಕೆ ಮಾಜಿ ಶಾಸಕ ಎ.ಬಿ.ದೇಸಾಯಿ ಭೇಟಿ
Date : 2018-05-17 SHARE
ಧಾರವಾಡ : ಧಾರವಾಡ ತಾಲೂಕಿನ ಉಪ್ಪಿನಬೆಟಗೇರಿಯ ಮೂರುಸಾವಿರ ವಿರಕ್ತಮಠಕ್ಕೆ ಮಾಜಿ ಶಾಸಕ ಎ.ಬಿ.ದೇಸಾಯಿ ಅವರು ಭೇಟಿ ನೀಡಿ ಶ್ರೀ ಕುಮಾರ ವಿರೂಪಾಕ್ಷ ಸ್ವಾಮೀಜಿಯವರ ಆಶೀರ್ವಾದ ಪಡೆದರು. ತಮ್ಮ ಪುತ್ರ ಅಮೃತ ದೇಸಾಯಿ ಧಾರವಾಡ ಗ್ರಾಮೀಣ ಕ್ಷೇತ್ರದ ಬಿಜೆಪಿಯ ಶಾಸಕರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಶ್ರೀಮಠಕ್ಕೆ ಭೇಟಿ ನೀಡಿದರು. ಈ ವೇಳೆ ಮಾಜಿ ಶಾಸಕ ಎ.ಬಿ.ದೇಸಾಯಿ ಅವರನ್ನು ಶ್ರೀಗಳು ಮಠದ ವತಿಯಿಂದ ಸನ್ಮಾನಿಸಿ ಗೌರವಿಸಿದರು. ಬಳಿಕ ಮಾತನಾಡಿದ ಕುಮಾರ ವಿರೂಪಾಕ್ಷ ಸ್ವಾಮೀಜಿ ಅವರು, ನಮ್ಮ ಭಾಗದ ಅಮೃತ ದೇಸಾಯಿ ಶಾಸಕರಾಗಿ ಆಯ್ಕೆಯಾಗಿದ್ದು ನಮ್ಮೆಲ್ಲರ ಸುದೈವ. ಅಮೃತ ದೇಸಾಯಿ ಜನರ ಆಶಯದಂತೆ ಕ್ಷೇತ್ರದಲ್ಲಿ ಉತ್ತಮವಾದ ಆಡಳಿತ ನೀಡುವುದರೊಂದಿಗೆ ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಸಿಕೊಂಡು ಜನಪರ ಕಾರ್ಯಗಳನ್ನು ಮಾಡಬೇಕು ಎಂದರು. ಮಾಜಿ ಶಾಸಕ ಎ.ಬಿ.ದೇಸಾಯಿ ಮಾತನಾಡಿ, ಕ್ಷೇತ್ರದ ಜನ ನಮ್ಮ ಮೇಲೆ ನಂಬಿಕೆ ಇಟ್ಟು ನನ್ನ ಮಗ ಅಮೃತ ದೇಸಾಯಿ ಅವರನ್ನು ಗೆಲ್ಲಿಸಿದ್ದಕ್ಕೆ ನಾನು ಚಿರ ಋಣಿಯಾಗಿದ್ದೇನೆ. ಕುಡಿಯುವ ನೀರಿನ ಸಮಸ್ಯೆಯಿಂದ ಜನ ತೊಂದರೆ ಅನುಭವಿಸುತ್ತಿದ್ದಾರೆ. ಅದಕ್ಕೆ ಮೊದಲು ಆದ್ಯತೆ ಕೊಟ್ಟು ನಂತರ ಹಂತ ಹಂತವಾಗಿ ಜನರ ಎಲ್ಲ ಕಾರ್ಯಗಳನ್ನು ಮಾಡಲು ಅಮೃತಗೆ ತಿಳಿಸಲಾಗುವುದು ಎಂದರು. ಈ ವೇಳೆ ಶಂಕ್ರಯ್ಯ ಇಂಚಗೇರಿಮಠ, ಕಲ್ಲಯ್ಯ ವಿಭೂತಿಮಠ, ಧರಣೇಂದ್ರ ಅಷ್ಟಗಿ, ಕೃಷ್ಣಾ ಬುದ್ನಿ, ಈರಪ್ಪ ಬಡ್ಡೂರ, ಮಡಿವಾಳಪ್ಪ ಕೋಟೂರ, ವಿರೂಪಾಕ್ಷಪ್ಪ ಬೆಳವಡಿ, ಬಸವರಾಜ ಕಬ್ಬೂರ, ರುದ್ರಪ್ಪ ಬಡ್ಡೂರ, ದುಂಡಪ್ಪ ಪಟ್ಟಣಶೆಟ್ಟಿ, ರಾಮಣ್ಣ ಬುದ್ನಿ, ಕಲ್ಲಪ್ಪ ಮುಳಕನವರ ಸಾಥ್ ನೀಡಿದರು.