ಪ್ರಭುಲಿಂಗ ನಾವದಗಿ ನೂತನ ಅಡ್ವೊಕೇಟ್ ಜನರಲ್
Date : 2018-05-17 SHARE
ಬೆಂಗಳೂರು: ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರನ್ನು ರಾಜ್ಯದ ನೂತನ ಅಡ್ವೊಕೇಟ್ ಜನರಲ್ ಆಗಿ ನೇಮಕ ಮಾಡಿ ರಾಜ್ಯಪಾಲ ವಜುಭಾಯ್ ವಾಲಾ ಗುರುವಾರ ಸಂಜೆ ಆದೇಶ ಹೊರಡಿಸಿದ್ದಾರೆ. ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ಈ ಹೊಸ ಆದೇಶ ಹೊರಬಿದ್ದಿರುವುದು ಭಾರೀ ಕುತೂಹಲ ಕೆರಳಿಸಿದೆ. ಮಧುಸೂದನ್ ನಾಯಕ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಆ ಸ್ಥಾನಕ್ಕೆ ನೂತನ ಸಿಎಂ ಯಡಿಯೂರಪ್ಪ ಅವರ ಶಿಫಾರಸಿನ ಮೇರೆಗೆ ಪ್ರಭುಲಿಂಗ ನಾವದಗಿ ಅವರನ್ನು ನೇಮಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ಈವರೆಗೆ ಖಾಲಿ ಇದ್ದ ರಾಜ್ಯದ ಅಡ್ವೊಕೇಟ್ ಜನರಲ್ ಹುದ್ದೆಯನ್ನು ಪ್ರಭುಲಿಂಗ ನಾವದಗಿ ಅವರನ್ನು ನೇಮಿಸುವ ಮೂಲಕ ಭರ್ತಿ ಮಾಡಿದಂತಾಗಿದೆ. ಇನ್ನೂ ಈ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು ಯಡಿಯೂರಪ್ಪ ಈ ಹಿಂದೆ ಜೈಲಿಗೆ ಹೋಗಿದ್ದ ವೇಳೆ ಲೋಕಾಯುಕ್ತ, ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ನಲ್ಲಿ ಇವರ ಪರ ವಾದ ಮಂಡಿಸಿ, ಕ್ಲೀನ್ ಚೀಟ್ ಕೊಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು.