ಕೆ.ಜಿ. ಬೋಪಯ್ಯ ನೇಮಕಕ್ಕೆ ಕಾಂಗ್ರೆಸ್ ತೀವ್ರ ವಿರೋಧ
Date : 2018-05-18 SHARE
ಬೆಂಗಳೂರು : ರಾಜ್ಯ ವಿಧಾನ ಸಭೆಯ ಹಂಗಾಮಿ ಸ್ಪೀಕರ್ ಆಗಿ ಕೆ.ಜಿ. ಬೋಪಯ್ಯ ಅವರನ್ನು ನೇಮಕ ಮಾಡಿರುವ ರಾಜ್ಯಪಾಲ ವಜುಬಾಯಿ ವಾಲಾ ಅವರ ಕ್ರಮಕ್ಕೆ ರಾಜ್ಯಕಾಂಗ್ರೆಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇದು ರಾಜ್ಯ ಬಿಜೆಪಿಯ ಕುತಂತ್ರವಾಗಿದ್ದು, ಶಾಸಕರ ಹಿರಿತನವನ್ನು ಕಡೆಗಣಿಸಿ ಬಿಜೆಪಿ ಇಂತಹ ಆಯ್ಕೆ ಮಾಡಿರುವದನ್ನು ಖಂಡಿಸಿ, ಮತ್ತೇ ಸುಪ್ರೀಂಕೋರ್ಟ್ ಮೋರೆ ಹೋಗಲು ಕಾಂಗ್ರೆಸ್ ನಾಯಕರು ಸಜ್ಜಾಗಿದ್ದಾರೆ. ಕಾಂಗ್ರೆಸ್ ನ ಹಿರಿಯ ವಕೀಲ ಅಭಿಷೇಕ ಮನು ಸಿಂಗ್ವಿ ಅವರು ಈ ನಿಟ್ಟಿನಲ್ಲಿ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ರಾಜ್ಯಪಾಲ ವಜುಬಾಯಿ ವಾಲಾ ಅವರು ಎರಡನೇ ಬಾರಿಗೆ ಇಂತಹ ತಪ್ಪು ಮಾಡಿದ್ದಾರೆ. ಸದನದ ಸಂಪ್ರದಾಯವನ್ನು ರಾಜ್ಯಪಾಲರು ಮುರಿದಿದ್ದಾರೆ. ಆರ್.ವಿ. ದೇಶಪಾಂಡೆ ಅವರು ಎಂಟು ಬಾರಿ ಆಯ್ಕೆಯಾಗಿರುವ ಹಿರಿಯ ಶಾಸಕರಾಗಿದ್ದಾರೆ. ಆದರೆ ಅವರನ್ನು ಬಿಟ್ಟು ಕೇವಲ ಮೂರು ಬಾರಿ ಶಾಸಕರಾಗಿರುವ ಬೋಪಯ್ಯ ಅವರನ್ನು ನೇಮಿಸಿರುವುದು ಸರಿಯಾದ ಬೆಳವಣಿಗೆ ಅಲ್ಲ ಎಂದು ಆಪಾದಿಸಿದ್ದಾರೆ. ಈ ಹಿಂದೆ ಕೆ.ಜೆ. ಬೋಪಯ್ಯ ಅವರು ಕೆಲ ಶಾಸಕರನ್ನು ಅನರ್ಹಗೊಳಿಸಿದ್ದನ್ನು ಸುಪ್ರೀಂಕೋರ್ಟ್ ರದ್ದು ಪಡಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಬೋಪಯ್ಯ ಅವರು ಪಕ್ಷಪಾತ ಆರೋಪ ಎದುರಿಸುತ್ತಿರುವ ಹಿನ್ನಲೆಯಲ್ಲಿ ಅವರು ಆ ಹುದ್ದೆಯಲ್ಲಿ ಮುಂದುವರೆಯುತ್ತಾರೆಯೇ ಅಥವಾ ಇಲ್ಲವೇ ಎನ್ನುವುದು ಸುಪ್ರೀಂಕೋರ್ಟ್ ಅಂಗಳದಲ್ಲಿ ನಿರ್ಧಾರವಾಗಲಿದೆ.