ವಿಧಾನ ಸಭೆಗೆ ಆಗಮಿಸಿ ಸಿದ್ಧತೆ ಪರಿಶೀಲನೆ ನಡೆಸಿದ ಹಂಗಾಮಿ ಸ್ಪೀಕರ್
Date : 2018-05-19 SHARE
ಬೆಂಗಳೂರು : ತೀವ್ರ ಕುತೂಹಲ ಕೆರಳಿಸಿರುವ ಹಂಗಾಮಿ ಸ್ಪೀಕರ್ ಕೆ.ಜಿ. ಬೋಪಯ್ಯ ಅವರ ನೇಮಕ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿರುವ ಬೆನ್ನ ಹಿಂದೆಯೇ ಬೋಪಯ್ಯ ಅವರು ಶನಿವಾರ ಬೆಳಗ್ಗೆ ವಿಧಾನಸೌಧಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದರು. ಅವರಿಗೆ ವಿಧಾನ ಸಭೆ ಕಾರ್ಯದರ್ಶಿ ಎಸ್. ಮೂರ್ತಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿರುವ ಕುರಿತು ಮಾಹಿತಿ ನೀಡಿದರು. ವಿಧಾನ ಸಭೆಯ ಕಾರ್ಯ ಕಲಾಪ ಸುಗಮವಾಗಿ ನಡೆಸಲು ಬೇಕಿರುವ ಸಿಬ್ಬಂದಿ, ವಿಧಾನಸೌಧದ ಒಳಗಡೆ ಹಾಗೂ ಹೊರಗಡೆ ಪೊಲೀಸ್ ಭದ್ರತೆ ಸೇರಿದಂತೆ ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಜಿ. ಬೋಪಯ್ಯ ಅವರು ವಿಧಾನಸಭೆಯ ವಿಶ್ವಾಸ ಮತ ಯಾಚನೆ ಕಾರ್ಯ ಕಲಾಪವನ್ನು ಸುಲಭವಾಗಿ ನಡೆಸಲಾಗುವುದು ಎಂದು ಹೇಳಿದರು.