ಕುಮಾರಸ್ವಾಮಿ ಎದುರು ಕಣ್ಣೀರು ಹಾಕಿದ ಕೋನರಡ್ಡಿ
Date : 2018-05-16 SHARE
ಬೆಂಗಳೂರು : ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ನವಲಗುಂದ ವಿಧಾನ ಸಭಾ ಕ್ಷೇತ್ರದಿಂದ ಜೆಡಿಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಶಾಸಕ ಎನ್.ಹೆಚ್. ಕೋನರಡ್ಡಿ ಅವರು ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ಡಿ. ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಕಣ್ಣೀರು ಹಾಕಿದ್ದಾರೆ. ಕೋನರಡ್ಡಿ ಅವರು ಗಳಗಳನೇ ಅತ್ತಿದ್ದನ್ನು ಕಂಡು ಭಾವುಕರಾದ ಹೆಚ್.ಡಿ. ಕೆ ಅವರು ಕೂಡ ಕೆಲ ಕಾಲ ಕಣ್ಣಿರು ಸುರಿಸಿದರು. ಅಲ್ಲದೆ, ಬಳಿಕ ಚೇತರಿಸಿಕೊಂಡ ಅವರು ಕೋನರಡ್ಡಿ ಅವರಿಗೆ ಸಮಾಧಾನ ಪಡಿಸಿ, ಧೃತಿಗೇಡದಂತೆ ಧೈರ್ಯ ತುಂಬಿದರು. ಈ ಹಿಂದೆ ನವಲಗುಂದ ಪಟ್ಟಣದಲ್ಲಿ ನಡೆದ ಕುಮಾರಪರ್ವದಲ್ಲಿ ಹೆಚ್.ಡಿ. ಕೆ ಅವರು ನವಲಗುಂದ ವಿಧಾನ ಸಭಾ ಕ್ಷೇತ್ರದಿಂದ ಎನ್.ಹೆಚ್. ಕೋನರಡ್ಡಿ ಅವರನ್ನು ಆರಿಸಿ ಕಳುಹಿಸಿದರೆ ಜೆಡಿಎಸ್ ಸರಕಾರದಲ್ಲಿ ಸಚಿವರನ್ನಾಗಿ ಮಾಡಲಾಗುವುದು ಎಂದು ಘೋಷಿಸಿದ್ದರು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿರುವ ಜೆಡಿಎಸ್ ಕಾಂಗ್ರೆಸ್ ಸಮ್ಮೀಶ್ರ ಸರಕಾರದ ರಚನೆ ವೇಳೆ ಕೋನರಡ್ಡಿ ಅವರು ಗೆಲುವು ಸಾಧಿಸುವ ಬದಲು ಸೋತಿರುವುದು ಅವರ ಅಪಾರ ಅಭಿಮಾನಿಗಳಿಗೆ ನೋವುಂಟು ಮಾಡಿದೆ. ಕೋನರಡ್ಡಿ ಅವರ ಸಾವಿರಾರು ಅಭಿಮಾನಿಗಳು ಈ ಬಗ್ಗೆ ಬಹಿರಂಗವಾಗಿಯೇ ಕಣ್ಣೀರು ಹಾಕುವ ಜೊತೆಗೆ ವಾಟ್ಸಪ್ ಹಾಗೂ ಫೇಸ್ ಬುಕ್ ಗಳಲ್ಲಿ ತಮ್ಮ ನೋವು ತೋಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.