ಯಡಿಯೂರಪ್ಪ ಅವರಿಂದ 5 ವರ್ಷದ ಸುಭದ್ರ ಸರಕಾರ
Date : 2018-05-17 SHARE
ಬೆಂಗಳೂರು : ರಾಜ್ಯದ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿರುವ ಬಿಜೆಪಿ ಸರಕಾರ ರಚನೆ ಮಾಡಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರನ್ನು ಸೆಳೆಯಲು ಈಗಾಗಲೇ ಪ್ರಯತ್ನ ನಡೆದಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೇಳಿದ್ದಾರೆ. ಅವರು ರಾಜ್ಯ ಭವನದ ಎದುರು ಸುದ್ದಿಗಾರರೊಂದಿಗೆ ಮಾತನಾಡಿ, ಬಿ.ಎಸ್. ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಸಮರ್ಥ, ಸದೃಢ ಹಾಗೂ ಸುಭದ್ರ ಸರಕಾರ ರಚನೆ ಮಾಡುತ್ತೆವೆ. ಕಾಂಗ್ರೆಸ್ ಪಕ್ಷವೂ 22 ರಾಜ್ಯಗಳಲ್ಲಿ ಈಗಾಗಲೇ ತಿರಸ್ಕಾರಗೊಂಡಿದೆ ಎಂದು ಕಿಡಿ ಕಾರಿದರು. ಸಿದ್ದರಾಮಯ್ಯ ಅವರನ್ನು ರಾಜ್ಯದ ಜನತೆ ಸೋಲಿಸಿದ್ದಾರೆ. ಆದರೂ ಅವರು ಜೆಡಿಎಸ್ ಜೊತೆಗೆ ಕೈ ಜೋಡಿಸಿ, ಅನೈತಿಕ ಸಂಬಂಧದ ಮೂಲಕ ರಾಜ್ಯವನ್ನು ಹಾಳು ಮಾಡಲು ಹೊರಟಿದ್ದಾರೆ. ಅದನ್ನು ನಾವು ನಡೆಯಲು ಬಿಡುವುದಿಲ್ಲ. ಸಂಖ್ಯಾಬಲದ ಆಧಾರದ ಮೇಲೆ ಭಾರತದಲ್ಲಿ ಕಳೆದ 70 ವರ್ಷದಲ್ಲಿ ಬಹುದೊಡ್ಡ ಪಕ್ಷಗಳನ್ನು ಕರೆದು ಅಧಿಕಾರ ಕೊಡಲಾಗಿದೆ. ಹಾಗೆಯೇ ನಾವು ಕೂಡ ವಿಧಾನ ಸಭೆಯಲ್ಲಿ ವಿಶ್ವಾಸಮತ ಸಾಬೀತು ಪಡಿಸಿ, ಅಧಿಕಾರದ ಚುಕ್ಕಾಣಿ ಹಿಡಿದು 5 ವರ್ಷಗಳ ಕಾಲ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಲಿದ್ದಾರೆ ಎಂದು ಕೇಂದ್ರ ಸಚಿವ ಅನಂತಕುಮಾರ ವಿಶ್ವಾಸ ವ್ಯಕ್ತಪಡಿಸಿದರು.