ಅನೈತಿಕ ಮೈತ್ರಿ ಯಿಂದ ಅಧಿಕಾರ ಕಬಳಿಸಲು ಕಾಂಗ್ರೆಸ್ - ಜೆಡಿಎಸ್ ಹುನ್ನಾರ
Date : 2018-05-17 SHARE
ಬೆಂಗಳೂರು : ರಾಜ್ಯದ ಜನರ ಬೆಂಬಲ ಬಿಜೆಪಿ ಪರ ಇದ್ದರೂ ಕೂಡ ಕಾಂಗ್ರೆಸ್ ಹಾಗೂ ಜೆಡಿಎಸ್ ಅನೈತಿಕ ಮೈತ್ರಿ ಮಾಡಿಕೊಂಡು ಅಧಿಕಾರ ಕಬಳಿಸಲು ಹುನ್ನಾರ ಮಾಡಿದ್ದಾರೆ ಎಂದು ನೂತನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದಾರೆ. ಅವರು ಬೆಂಗಳೂರಿನ ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಚಿವ ಸಂಪುಟದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನಗೆ ಆರೂವರೆ ಕೋಟಿ ಜನರ ಬೆಂಬಲವಿದೆ. ಇದರಲ್ಲಿ ನಾನು ನೂರಕ್ಕೆ ನೂರು ಯಶ ಕಾಣುತ್ತೇನೆ ಎಂದು ಹೇಳಿದರು. ಬಿಜೆಪಿ ಸರಕಾರ ರಚನೆ ಮಾಡುವ ಕೆಲಸಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಬೆಂಬಲ ಕೊಡುತ್ತಾರೆ. ಅವರು ನನ್ನ ಪರ ಇದ್ದಾರೆ. ಈ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಪ್ರಕರಣವಿರುವುದರಿಂದ ನಾನು ಹೆಚ್ಚು ಮಾತನಾಡಲ್ಲ ಎಂದರು. ರಾಷ್ಟ್ರೀಕೃತ ಬ್ಯಾಂಕ್ ಗಳ ಒಂದು ಲಕ್ಷದ ವರೆಗೆ ಸಾಲಮನ್ನಾ, ನೇಕಾರರ ಸಾಲಮನ್ನಾ, ಸಹಕಾರಿ ಬ್ಯಾಂಕ್ ಗಳ ಬೆಳೆಸಾಲ ಮನ್ನಾ ಮಾಡುವ ನಿರ್ಧಾರ ಮಾಡಿದ್ದೇನೆ. ಈ ಬಗ್ಗೆ ಈಗಾಗಲೇ ಮುಖ್ಯಕಾರ್ಯದರ್ಶಿ ಜೊತೆಗೆ ಚರ್ಚಿಸಿದ್ದೇನೆ. ಅಂಕಿ ಅಂಶಗಳು ಬಂದ ನಂತರ ನಾಳೆ ಸಂಜೆಯವರೆಗೆ ಈ ಬಗ್ಗೆ ಕ್ರಮ ಕೈಗೊಂಡು ರೈತರಿಗೆ ಹಾಗೂ ನಾಡಿನ ಜನರಿಗೆ ನೀಡಿದ ಭರವಸೆ ಈಡೇರಿಸುತ್ತೇನೆ ಎಂದು ಭರವಸೆ ನೀಡಿದರು. ಇದೇ ವೇಳೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸಿದ ಅವರು ರಾಜ್ಯದ ಜನತೆ ನನ್ನ ಮೇಲಿಟ್ಟಿರುವ ಪ್ರೀತಿ ವಿಶ್ವಾಸಕ್ಕೆ ನಾನು ಋಣಿಯಾಗಿದ್ದೇನೆ. ಅವರ ಆರ್ಶೀವಾದದ ಫಲವಾಗಿ ನಾನು ಇಂದು ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ ಎಂದರು.