ಕಾಂಗ್ರೆಸ್ –ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ
Date : 2018-05-21 SHARE
ನವದೆಹಲಿ : ಕಾಂಗ್ರೆಸ್ ವಿರುದ್ಧ ಕೆಲವು ಸ್ಥಾನಗಳಲ್ಲಿ ಗೆಲುವು ಸಾಧಿಸಿರುವ ಜೆಡಿಎಸ್, ಜೆಡಿಎಸ್ ವಿರುದ್ಧ ಕಾಂಗ್ರೆಸ್ ಕೂಡ ಕೆಲವು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಇದು ಯಾವ ಸಂದೇಶ ಸಾರುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಿಡಿ ಕಾರಿದ್ದಾರೆ. ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪರಸ್ಪರ ಕಚ್ಚಾಡಿ, ವಾಗ್ದಾಳಿ ನಡೆಸಿ ಇಂದು ಸರಕಾರ ರಚನೆ ಮಾಡಿಕೊಂಡು ಮೈತ್ರಿ ಸರಕಾರ ನಡೆಸುವ ಸ್ಥಿತಿ ಬಂದಿರುವುದು ಇದು ಜನರ ಗೆಲುವು ಅಲ್ಲ. ಜೆಡಿಎಸ್ ಹಾಗೂ ಕಾಂಗ್ರೆಸ್ ಗೆಲುವಲ್ಲ ಎಂದು ಗುಡುಗಿದರು. ಆ ಎರಡು ಪಕ್ಷಗಳ ನಾಯಕರು ನಾಡಿನೆಲ್ಲಡೆ ವಿಜಯೋತ್ಸವ ಆಚರಿಸುತ್ತಿರುವುದು ಏಕೆ. ಅವರ ಸಚಿವರು, ಮುಖ್ಯಮಂತ್ರಿಗಳು ಸೋಲು ಅನುಭವಿಸಿದ್ದಕ್ಕೆ ಸಂಭ್ರಮಾಚರಣೆ ಮಾಡುತ್ತಿದ್ದಾರೆಯೇ ಎಂದು ಕುಟುಕಿದರು. ಜೆಡಿಎಸ್ ಕೆಲವು ಕಡೆ ಠೇವಣಿ ಕಳೆದುಕೊಂಡಿದೆ. ಅದಕ್ಕಾಗಿ ಸಡಗರನಾ ಎಂದು ಪ್ರಶ್ನಿಸಿದರು. ಜನರ ಮುಂದೆ ತಮ್ಮ ಸ್ಪಷ್ಟ ನಿಲುವು ತಿಳಿಸಬೇಕು. ಚುನಾವಣೆಯ ಮುನ್ನವೇ ಎರಡು ಪಕ್ಷಗಳಿಗೆ ಸೋಲಿನ ಭೀತಿ ಇತ್ತು. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವೂ ಭಾಷಾ, ಕನ್ನಡ ಬಾವುಟ, ಲಿಂಗಾಯತ ಧರ್ಮ ಒಡೆಯುವ ಕೆಲಸ, ಧನ, ಜಾತಿ ಬಳಸಿಕೊಳ್ಳಲಾಗಿದೆ. ಚುನಾವಣೆಯಲ್ಲಿ ಅವರು ಯಾವ ರೀತಿ ಗೆದ್ದಿದ್ದಾರೆ ಎಂಬುದು ಅಪಹಾಸ್ಯದ ಸಂಗತಿಯಾಗಿದೆ ಎಂದು ವಾಗ್ದಾಳಿ ನಡೆಸಿದ ಅವರು ಜೆಡಿಎಸ್ ಕಾಂಗ್ರೆಸ್ ಹೊಂದಾಣಿಕೆಯನ್ನು ಅನೈತಿಕ ಸಂಬಂಧ ಎಂದು ಜರಿದಿದ್ದಾರೆ.