ಸಚಿವ ಸ್ಥಾನ ಹಂಚಿಕೆ ಕಾಂಗ್ರೆಸ್ ಗೆ ಬಿಟ್ಟದ್ದು ಎಂದ ದೊಡ್ಡ ಗೌಡರು
Date : 2018-05-22 SHARE
ಬೆಂಗಳೂರು : ಸಚಿವ ಸ್ಥಾನ ಹಂಚಿಕೆ ಕಾಂಗ್ರೆಸ್ ನಾಯಕರಿಗೆ ಬಿಟ್ಟದ್ದು. ಅದರಲ್ಲಿ ನಾನು ಹಸ್ತಕ್ಷೇಪ ಮಾಡಲ್ಲ ಎಂದು ಜೆಡಿಎಸ್ ವರಿಷ್ಟ ಹೆಚ್.ಡಿ. ದೇವೆಗೌಡ ಸ್ಪಷ್ಟಪಡಿಸಿದ್ದಾರೆ. ಅವರು ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಡಿ.ಕೆ. ಶಿವಕುಮಾರಗೆ ಡಿಸಿಎಂ ಸ್ಥಾನ ಬೇಡ ಎಂದಿಲ್ಲ. ಅದು ನನಗೆ ಸಂಬಂಧಿಸಿದ ವಿಷಯವಲ್ಲ. ಅದರಲ್ಲಿ ನಾನು ಭಾಗವಹಿಸುವುದಿಲ್ಲ ಎಂದರು. ನನಗೆ ಸರಕಾರ ಸುಭದ್ರವಾಗಿ ಐದು ವರ್ಷ ನಡೆಸುವುದಷ್ಟೇ ಮುಖ್ಯ. ಅದು ಬಿಟ್ಟು ನಾನು ಯಾವುದೇ ವಿಷಯದಲ್ಲಿ ಮಧ್ಯಪ್ರವೇಶಮಾಡುವುದಿಲ್ಲ. ಅದರಲ್ಲಿ ನನಗೆ ಉತ್ಸಾಹವೂ ಇಲ್ಲ ಎಂದರು. ಇದೇ ವೇಳೆ ನನ್ನ ಪದ್ಮನಾಭನಗರದ ಮನೆಗೆ ಹಿರಿಯ ಅಧಿಕಾರಿಗಳನ್ನು ಕರೆಸಿಕೊಂಡು ನಾನು ಮಾತನಾಡಿಲ್ಲ. ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ರತ್ನಪ್ರಭಾ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರು ಅಧಿಕಾರ ಸ್ವೀಕಾರ ಮಾಡಿದ ನಂತರ ಕಂಡಿರಲಿಲ್ಲ. ಹೀಗಾಗಿ ಬಂದು ಮಾತನಾಡಿ ಹೋಗಿದ್ದಾರೆ. ಇದರಲ್ಲಿ ಯಾವುದೇ ವಿಶೇಷತೆ ಇಲ್ಲ. ಅದಕ್ಕೆ ರಾಜಕೀಯ ಬಣ್ಣ ಹಚ್ಚುವುದು ಸರಿಯಲ್ಲ ಎಂದರು.