ಕಾಂಗ್ರೆಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ
Date : 2018-05-23 SHARE
ಬೆಂಗಳೂರು : ಯಾವ ಅನೈತಿಕ, ಯಾರು ನೈತಿಕ ಉಳಿಸಿಕೊಂಡಿದ್ದಾರೆ. ನಮಗೂ ಉತ್ತರ ಸಿಗಲ್ಲ. ಅವರಿಗೂ ಉತ್ತರ ಸಿಗಲ್ಲ. ಅವರ ಎದುರು ಉತ್ತರ ಕೊಡುತ್ತೇನೆ. ಹೊಂದಾಣಿಕೆ ಸರಿ ಅನಿಸುವಂತೆ ಮುಂದಿನ ದಿನಗಳಲ್ಲಿ ನಡೆದುಕೊಳ್ಳುತ್ತೇವೆ ಎಂದು ನೂತನ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು. ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ನಡೆಸಿದ ಮೊದಲ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಸಮ್ಮೀಶ್ರ ಸರಕಾರ ಸದೃಢವಾಗಿ ನಡೆಯುತ್ತದೆ. ನಾಡಿನ ಜನತೆಯ ಸಮಸ್ಯೆಗಳಿಗೆ ಸ್ಪಂದಿಸುವ ಆಡಳಿತ ನೀಡುತ್ತೇವೆ. ಸಂಪೂರ್ಣ ಬಹುಮತ ಬರದಿದ್ದರೆ ವಿರೋಧ ಪಕ್ಷಗಳ ಸಾಲಿನಲ್ಲಿ ಕುಳಿತುಕೊಳ್ಳುತ್ತೇವೆ ಎಂದು ಹೇಳಿದ್ದೆ. ಇಂದು ಅಧಿಕಾರದ ಆಸೆಯಿಂದ ನಾನು ಕೈ ಜೋಡಿಸಿಲ್ಲ. ನಾನು ಒಂದು ರೀತಿಯಲ್ಲಿ ಪರಿಸ್ಥಿತಿಯ ಕೂಸಾಗಿದ್ದೇನೆ. ಒಂದು ಹೆಜ್ಜೆ ಇಡಬೇಕಾದರೂ ಸೂಕ್ಷ್ಮವಾಗಿ ಇಡಬೇಕಾಗುತ್ತದೆ ಎಂದರು. ದೇಶಕ್ಕೆ ಮಾದರಿ ಸಮ್ಮೀಶ್ರ ಸರಕಾರ ಕೊಡುತ್ತೇನೆ. ನನ್ನ ಪ್ರಣಾಳಿಕೆ ಬಗ್ಗೆ ಅನೇಕ ಅನುಮಾನಗಳಿವೆ.ರೈತರಿಗೆ, ನಿರುದ್ಯೋಗ, ಹಿರಿಯ ನಾಗರಿಕ ವೇತನ, ಶಿಕ್ಷಣ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸರಕಾರದ ಪ್ರಣಾಳಿಕೆ ನೋಡಿ ಹೊಸ ಬಜೆಟ್ ಘೋಷಣೆ ಮಾಡುವನಿದ್ದೇನೆ. ಸಾಲಮನ್ನಾ ಆಗಲ್ಲ ಎಂದು ಹೇಳಿಲ್ಲ. ಆದರೂ ಕೆಲವರು ಅಪಪ್ರಚಾರ ಮಾಡಿದ್ದಾರೆ. ನಮ್ಮದು ಸಮ್ಮೀಶ್ರ ಸರಕಾರ, ಏಕಾಂಗಿಯಾಗಿ ತೀರ್ಮಾನ ಕೈಗೊಳ್ಳಲು ಆಗಲ್ಲ. ಕಾಂಗ್ರೆಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದರು. ವಿರೋಧ ಪಕ್ಷಗಳಿಗೆ ಬೀದಿಗಿಳಿದು ಹೋರಾಟ ಮಾಡಲು ಅವಕಾಶ ನೀಡಲ್ಲ. ನಾನು ಅವರಿಗೆ ಯಾವುದೇ ಅಸ್ತ್ರ ಕೊಡಲ್ಲ. ರೈತರ ಹೆಸರಿನಲ್ಲಿ ಚೈತನ್ಯ ಯಾತ್ರೆ, ಪರಿವರ್ತನೆ ಯಾತ್ರೆ ಮಾಡಿದ್ದೀರಿ. ಈಗ ವಿಶ್ವಾಸಮತ ಯಾಚನೆ ಮಾಡಿದ ನಂತರವೇ ನಮ್ಮ ಸರಕಾರದ ಕಾರ್ಯ ಆರಂಭವಾಗುತ್ತದೆ ಎಂದರು. ರೈತರ ಸಾಲಮನ್ನಾ ಯಾವ ರೀತಿ ಮಾಡಬೇಕು ಎಂಬ ಬ್ಲೂಪ್ರಿಂಟ್ ರೆಡಿಯಾಗಿದೆ. ಆರ್ಥಿಕ ತಜ್ಞರ ಲೆಕ್ಕಚಾರದ ಪ್ರಚಾರ ಹೆಜ್ಜೆ ಹಾಕುತ್ತೇನೆ. ಸರಕಾರ ದಾರಿ ತಪ್ಪಿದೆ ಎಂಬ ಅಭಿಪ್ರಾಯ ಬರಬಾರದು. ಆ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇನೆ. ಪಲಾಯನವಾದ ಮಾಡಲ್ಲ. ಕಾಂಗ್ರೆಸ್ ಅನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಂಡು ಹೆಜ್ಜೆ ಇಡುತ್ತೇನೆ. ರಾಜಕೀಯ ಬದಿಗಿಟ್ಟು ಕೆಲಸ ಮಾಡುತ್ತೇವೆ ಎಂದು ನೂತನ ಸಿಎಂ ಕುಮಾರಸ್ವಾಮಿ ಪ್ರಕಟಿಸಿದರು.