ಎಚ್. ಕೆ. ಪಾಟೀಲ ಶಾಸಕ ಸ್ಥಾನಕ್ಕೆ ಕಂಟಕ ?
Date : 2018-05-24 SHARE
ಬೆಂಗಳೂರು : ನಕಲಿ ಮತದಾನ, ಸತ್ತವರ ಹೆಸರಿನಲ್ಲಿ ಮತದಾನ ಸೇರಿದಂತೆ ವಿವಿಧ ಅಕ್ರಮಗಳ ಮೂಲಕ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಗದಗ ಶಾಸಕ ಹಾಗೂ ಕಾಂಗ್ರೆಸ್ ನ ಹಿರಿಯ ನಾಯಕ ಎಚ್.ಕೆ. ಪಾಟೀಲ ಅವರ ಶಾಸಕ ಸ್ಥಾನಕ್ಕೆ ಇದೀಗ ಕಂಟಕ ಎದುರಾಗಿದೆ. ಗದಗನ ಬಿಜೆಪಿಯ ಪರಾಜಿತ ಅಭ್ಯರ್ಥಿ ಅನೀಲ್ ಮೆಣಸಿನಕಾಯಿ ಅವರು ಸಲ್ಲಿಸಿರುವ ಲಿಖಿತ ದೂರನ್ನು ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ರವಾನೆಯಾಗಿದೆ. ಗದಗ ಜಿಲ್ಲಾಧಿಕಾರಿ ಮನೋಜ ಜೈನ್ ಈ ದೂರನ್ನು ರವಾನಿಸಿದ್ದಾರೆ. ಮೇ 22ರಂದು ಅನೀಲ್ ಮೆಣಸಿನಕಾಯಿ ಈ ದೂರನ್ನು ಗದಗ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಅದನ್ನು ಚುನಾವಣಾ ಆಯೋಗಕ್ಕೆ ಗದಗ ಜಿಲ್ಲಾಡಳಿತ ರವಾನಿಸಿದೆ. ಈ ದೂರಿನಲ್ಲಿ ಎಚ್.ಕೆ. ಪಾಟೀಲ ಶಾಸಕತ್ವ ಸ್ಥಾನದಿಂದ ಅನರ್ಹಗೊಳಿಸುವಂತೆ ಮನವಿ ಮಾಡಲಾಗಿದೆ. ಚುನಾವಣಾ ಅಕ್ರಮ ನಡೆದಿದ್ದು, ಅದಕ್ಕೆ ಸಂಭಂದಿಸಿದ ದಾಖಲೆಗಳು ನಮ್ಮ ಬಳಿ ಇವೆ ಎಂದು ಬಿಜೆಪಿ ಹೇಳಿಕೊಂಡಿದೆ. ಇದನ್ನು ಚುನಾವಣಾ ಆಯೋಗ ಯಾವ ರೀತಿ ಪರಿಗಣಿಸುತ್ತದೆ ಎಂಬುದು ಎಲ್ಲರಿಗೂ ತೀವ್ರ ಕುತೂಹಲ ಕೆರಳಿಸಿದೆ.