ಜೆಡಿಎಸ್ ಕಾಂಗ್ರೆಸ್ ವಿಜಯೋತ್ಸವಕ್ಕೆ ಕಲ್ಲು ತೂರಿದ ಬಿಜೆಪಿ ಕಾರ್ಯಕರ್ತರು
Date : 2018-05-20 SHARE
ಕೊಪ್ಪಳ: ಜೆಡಿಎಸ್-ಕಾಂಗ್ರೆಸ್ ವಿಜಯೋತ್ಸವಕ್ಕೆ ಬಿಜೆಪಿ ಕಾರ್ಯಕರ್ತರು ಅಡ್ಡಿ ತೋರಿದಲ್ಲದೆ, ಕಲ್ಲು ತೂರಿದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದಿದೆ. ಯಡಿಯೂರಪ್ಪ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆ ಯಲ್ಲಿ ಜೆಡಿಎಸ್- ಕಾಂಗ್ರೆಸ್ ವಿಜಯೋತ್ಸವದ ವೇಳೆ ಬಿಜೆಪಿ ಕಾರ್ಯಕರ್ತರ ಗಲಾಟೆ ಮಾಡಿದ್ದಾರೆ. ಬೈಕ್ ರ್ಯಾಲಿ ಮಾಡುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದರಿಂದ ಗಲಾಟೆ ಯಲ್ಲಿ ಯುಸೂಫ್, ರಾಜವಲಿ ತಲೆಗೆ ಗಂಭೀರ ಗಾಯವಾಗಿದೆ. ಇದರಿಂದಾಗಿ ಯೂಸೂಫ್ ಸೇರಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಇದರಿಂದಾಗಿ ಸದ್ಯ ಗಂಗಾವತಿ ನಗರದಲ್ಲಿ ಬೂದಿಮುಚ್ಚಿದ ಕೆಂಡದಂತಿದೆ. ಗುಂಪು ಗುಂಪಾಗಿ ನಿಂತ ಜನರನ್ನು ಚದುರಿಸಿದ ಪೊಲೀಸರು ಪರಿಸ್ಥಿತಿ ಹತೋಟಿಗೆ ತರಲು ಹರಸಾಹಸ ಪಡಬೇಕಾಯಿತು. ಎಸ್ಪಿ ಡಾ.ಅನುಪಶೆಟ್ಟಿ , ಸ್ವತಃ ಲಾಠಿ ಹಿಡಿದು ರಸ್ತೆಗಿಳಿದರು. ಅಲ್ಲದೆ, ಅಂಗಡಿ ಮುಂಗಟ್ಟುಗಳು ಬಲವಂತವಾಗಿ ಬಂದ್ ಮಾಡಿ ಗಂಗಾವತಿಯ ಆಯಕಟ್ಟಿನ ಸ್ಥಳದಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.