ನೀಚ ರಾಜಕಾರಣಿ ಜೊತೆಗೆ ಬೆಲ್ಲದ ಕೈ ಜೋಡಣೆ : ಇಸ್ಮಾಯಿಲ್ ತಮಟಗಾರ ಆರೋಪ
Date : 2018-05-20 SHARE
ಧಾರವಾಡ : ಸರಳ, ಸಜ್ಜನ ರಾಜಕಾರಣಿ ಎಂದು ಹೇಳಿಕೊಳ್ಳುವ ಶಾಸಕ ಅರವಿಂದ ಬೆಲ್ಲದ ನೀಚ ರಾಜಕಾರಣಿ ಜೊತೆಗೆ ಕೈ ಜೋಡಿಸಿ, ನನ್ನ ವಿರುದ್ಧ ವ್ಯವಸ್ಥಿತ ಅಪಪ್ರಚಾರ ಮಾಡಿಸಿದ್ದಾರೆ ಎಂದು ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ನ ಪರಾಜಿತ ಅಭ್ಯರ್ಥಿ ಇಸ್ಮಾಯಿಲ್ ತಮಟಗಾರ ಆರೋಪಿಸಿದರು. ಅವರು ಭಾನುವಾರ ನಗರದ ಮಾರ್ಡನ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಕೃತಜ್ಞತಾ ಸಮಾರಂಭದಲ್ಲಿಮಾತನಾಡಿದರು. ಬೆಲ್ಲದ ಅವರಿಗೆ ಕೆಲವು ಕಾಂಗ್ರೆಸ್ ನಾಯಕರು ಅವರ ಜೊತೆಗೆ ಕೈ ಜೋಡಿಸಿದರು. ಹೀಗಾಗಿ ನಾನು ಸೋತಿದ್ದೇನೆ. ಹಿಂದು ಹಾಗೂ ಮುಸ್ಲಿಂ ಹೆಸರಿನಲ್ಲಿ ಜಾತಿ ಎತ್ತಿ ಕಟ್ಟುವ ಕೆಲಸ ಮಾಡಿದ್ದಾರೆ. ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡಿಸಿದರು. ಅಲ್ಲದೆ, ಕೆಲವು ಮುಸ್ಲಿಂರನ್ನು ಎತ್ತಿ ಕಟ್ಟಿ ಅವರ ಕೈಯಿಂದ ದಾಖಲೆಗಳನ್ನು ಬಿಡುಗಡೆಗೊಳಿಸಿದರು. ಸಾಮಾಜಿಕ ಜಾಲತಾಣದ ಮೂಲಕ ಆರೋಪ ಮಾಡಿಸಿದರು ಎಂದು ದೂರಿದರು. ನನ್ನ ಮೊಬೈಲ್ ಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಹೇಗಾದರೂ ಮಾಡಿ ಅವರು ಜಗಳ ತೆಗೆಯಬೇಕು. ನಾನು ಹೋಗಿ ಅವರಿಗೆ ಹೊಡೆಯಬೇಕು ಎಂದು ಪೀಡಿಸಿದರು. ಆದರೂ ನಾನು ತಾಳ್ಮೆ ಕಳೆದುಕೊಳ್ಳದೆ, ಅವರು ಏನೂ ಬೈದರೂ ಶಾಂತವಾಗಿ ಕೇಳಿಸಿಕೊಂಡಿದ್ದೇನೆ. ದೇವರು ಎಲ್ಲವನ್ನು ನೊಡಿಕೊಳ್ಳುತ್ತಾರೆ ಎಂದು ಎಚ್ಚರಿಸಿದರು.