FOR BEST NEWS & ADVERTISEMENT CONTACT PRAJAKIRAN - 9341197609
  • ಮೇ ೨೬, ೨೭ರಂದು ಎರಡು ದಿನಗಳ ಕಾಲ ಮೇ ಸಾಹಿತ್ಯ ಮೇಳ


    Date : 2018-05-21 SHARE

    ಧಾರವಾಡ : ಗದಗದ ಲಡಾಯಿ ಪ್ರಕಾಶನ, ಕವಲಕ್ಕಿಯ ಕವಿ ಪ್ರಕಾಶನ ಹಾಗೂ ಧಾರವಾಡದ ಚಿತ್ತಾರ ಕಲಾ ಬಳಗದ ವತಿಯಿಂದ ಮೇ ೨೬ ರಿಂದ ಎರಡು ದಿನಗಳ ಕಾಲ ಬಹುತ್ವ ಭಾರತ ಇಂದು ಮತ್ತು ನಾಳೆ ವಿಷಯದ ಮೇಲೆ ಮೇ ಸಾಹಿತ್ಯ ಮೇಳ ಆಯೋಜಿಸಲಾಗಿದೆ ಎಂದು ಲಡಾಯಿ ಪ್ರಕಾಶನದ ಬಸವರಾಜ ಸೂಳೀಬಾವಿ ತಿಳಿಸಿದರು. ಅವರು ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೇ ೨೬ ರಂದು ಬೆಳಿಗ್ಗೆ ೧೦ ಗಂಟೆಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ಆವರಣದಲ್ಲಿ ತೆಲಂಗಾಣದ ಲೇಖಕಿ ಓಲ್ಗಾ ಅವರು ಮೇಳಕ್ಕೆ ಚಾಲನೆ ನೀಡಲಿದ್ದಾರೆ. ನಟ ಪ್ರಕಾಶ ರೈ ದಿಕ್ಸೂಚಿ ಭಾಷಣ ಮಾಡಲಿದ್ದು, ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಎರಡು ದಿನಗಳ ಈ ಮೇಳದಲ್ಲಿ ೨೬ ಪುಸ್ತಕ ಬಿಡುಗಡೆಗೊಳ್ಳಲಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಸ್.ಜಿ.ಸಿದ್ದರಾಮಯ್ಯ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಇನ್ನೂ ಸಂವಿಧಾನದ ಸವಾಲುಗಳು, ಸಾಹಿತಿ-ಸಾಹಿತ್ಯ-ಸಿದ್ದಾಂತ ಸೇರಿದಂತೆ ವಿವಿಧ ವಿಷಯಗಳ ಕುರಿತು ಗೋಷ್ಠಿಗಳು, ಕವಿ ಗೋಷ್ಠಿ ನಡೆಯಲಿವೆ ಎಂದರು. ಮೇ ೨೭ ರಂದು ಸಂಜೆ ಜರುಗುವ ಮೇಳದ ಸಮಾರೋಪ ಸಮಾರಂಭದಲ್ಲಿ ಯುವ ಕವಿ ಲಕ್ಮೀನಾರಾಯಣ ಸ್ವಾಮಿ ಅವರಿಗೆ ವಿಭಾ ಸಾಹಿತ್ಯ ಪ್ರಶಸ್ತಿ ಹಾಗೂ ಕಲಬುರಗಿಯ ಕೆ.ನೀಲಾ ಅವರಿಗೆ ಬಂಡ್ರಿ ಸಮಾಜಮುಖಿ ಶ್ರಮಜೀವಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಎರಡೂ ಪ್ರಶಸ್ತಿಗಳು ೫೦೦೦ ರೂ. ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ ಎಂದು ತಿಳಿಸಿದರು. ಈ ಎರಡು ದಿನಗಳ ಕಾಲ ವಿವಿಧ ವಿಷಯಗಳ ಮೇಲೆ ಸಂವಾದ, ನಡೆಯಲಿದೆ. ದೆಹಲಿಯಿಂದ ಶಿವಪ್ರಕಾಶ್, ಅನೀಲ್ ಬನ್ ಭಟ್ಟಾಚಾರ್ಯ, ತಮಿಳುನಾಡಿನ ಕಣ್ವಂ ಸುಂದರನ್, ಮಹಾರಾಷ್ಟ್ರದ ರಾಮ್ ಕುಮಾರ, ಸೇರಿದಂತೆ ದಕ್ಷಿಣ ಭಾರತದ ಪ್ರಗತಿ ಪರ ಸಂಘಟನೆಯ ಮುಖಂಡರು, ಚಿಂತಕರು, ಹೋರಾಟಗಾರರು ಆಗಮಿಸಲಿದ್ದಾರೆ, ಪ್ರತಿನಿಧಿಗಳು ಈಗಾಗಲೇ ನೂರಾರು ಪ್ರತಿನಿಧೀಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದರು. ಮೇ ೨೭ರಂದು ನಾಡಿನ ವಿವಿಧ ಕಲಾವಿದರು ರಚಿಸಿದ ಬಹುತ್ವದ ಭಾರತದ ಚಿತ್ರ ಕಲಾ ಪ್ರದರ್ಶನ ನಡೆಯಲಿದೆ ಎಂದು ಮೇ ಸಾಹಿತ್ಯ ಮೇಳದ ಸಂಘಟಕ ಬಸವರಾಜ ಸೂಳಿಬಾವಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ರಂಜಾನ್ ದರ್ಗಾ, ಸಾಹಿತಿಗಳಾದ ಮಾಲತಿ ಪಟ್ಟಣಶೆಟ್ಟಿ, ವಕೀಲ ಪಿ.ಎಚ್. ನೀರಲಕೇರಿ, ಶಂಕರಗೌಡ ಸಾತ್ಮಾರ, ವಿಶ್ವನಾಥ ಚಿಂತಾಮಣಿ, ಕೆ.ಎಚ್. ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.