ಅಂತಾರಾಷ್ಟ್ರೀಯ

ನಿರ್ಭಯಾ ಅತ್ಯಾಚಾರ, ಕೊಲೆ ಆರೋಪಿ ಮುಕೇಶ್ ಕ್ಷಮಾದಾನ ಅರ್ಜಿ ತಿರಸ್ಕರಿಸಿದ ರಾಷ್ಟ್ರಪತಿ

ನವದೆಹಲಿ prajakiran.com : ದೇಶವನ್ನೇ ಬೆಚ್ಚಿ ಬೀಳಿಸಿದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿ ಮುಕೇಶ್ ಸಿಂಗ್ ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತಿರಸ್ಕರಿಸಿದ್ದಾರೆ.

ಅವರು ಶನಿವಾರ ಈ ನಿರ್ಧಾರ ಪ್ರಕಟಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ನಿರ್ಭಯಾ ಪ್ರಕರಣದಲ್ಲಿ ಈಗಾಗಲೇ ಗಲ್ಲು ಶಿಕ್ಷೆಗೆ ಗುರಿಯಾಗಿರುವ ನಾಲ್ವರು ಅತ್ಯಾಚಾರಿಗಳ ಪೈಕಿ ಮುಕೇಶ್ ಸಿಂಗ್ ಮಾತ್ರ ಕ್ಷಮಾದಾನ ಅರ್ಜಿ ಸಲ್ಲಿಸಿದ್ದ. ಮುಕೇಶ್ ಸಿಂಗ್​ ಸಲ್ಲಿರುವ ಈ ಮನವಿಯನ್ನು ತಿರಸ್ಕರಿಸುವಂತೆ ಕೇಂದ್ರ ಗೃಹ ಸಚಿವಾಲಯ ಮನವಿ ಮಾಡಿದ ಹಿನ್ನಲೆಯಲ್ಲಿ ರಾಷ್ಟ್ರಪತಿಗಳು ಕೂಡ ಸಮ್ಮತಿ ಸೂಚಿಸಿದ್ದಾರೆ.

ಮುಕೇಶ್ ಸಿಂಗ್ ಕೆಲ ದಿನಗಳ ಹಿಂದೆ ತನಗೆ ಕ್ಷಮಾದಾನ ನೀಡುವಂತೆ ಮನವಿ ಮಾಡಿಕೊಂಡಿದ್ದ. ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಗುರುವಾರ ಈ ಮನವಿಯನ್ನು ಗೃಹ ಸಚಿವಾಲಯಕ್ಕೆ ರವಾನಿಸಿದ್ದರು.

2012ರ ಡಿ. 16ರ ರಾತ್ರಿ ನವದೆಹಲಿಯಲ್ಲಿ ಚಲಿಸುವ ಬಸ್ ನಲ್ಲಿ ಆರು ಮಂದಿ ಸಾಮೂಹಿಕ ಅತ್ಯಾಚಾರ ಮಾಡಿ ಎಸೆದು ಹೋಗಿದ್ದರು. ಬಳಿಕ ಚಿಕಿತ್ಸೆ ಫಲಿಸದೆ ಅವರು ಮೂರು ದಿನಗಳ ಜೀವನ್ಮರಣ ಹೋರಾಟ ನಡೆಸಿ ಸಾವನ್ನಪ್ಪಿದ್ದರು.

ದೆಹಲಿ ಹೈಕೋರ್ಟ್ ಈ ನಾಲ್ವರು ಅಪರಾಧಿಗಳಿಗೆ ಡೆತ್ ವಾರೆಂಟ್ ಹೊರಡಿಸಿ, ಜನವರಿ 22, ಬೆಳಗ್ಗೆ 7ಗಂಟೆಗೆ ನೇಣಿಗೇರಿಸಲು ಸಮಯ ನಿಗದಿ ಪಡಿಸಿತ್ತು.

ಆದರೆ, ಕ್ಷಮಾದಾನ ಅರ್ಜಿ ಇನ್ನೂ ವಿಚಾರಣಾ ಹಂತದಲ್ಲಿರುವುದರಿಂದ ನಿನ್ನೇಯಷ್ಟೇ ದೆಹಲಿಯ ಪಟಿಯಾಲಾ ಕೋರ್ಟ್ ಮತ್ತೇ ತಿಹಾರ್ ಜೈಲು ಅಧಿಕಾರಿಗಳಿಗೆ ಹೊಸದಾಗಿ ಡೆತ್ ವಾರೆಂಟ್ ಹೊರಡಿಸಲು ಮನವಿ ಸಲ್ಲಿಸುವಂತೆ ಸೂಚಿಸಿದೆ.

ಜೊತೆಗೆ ಜ. 22ರಂದು ಗಲ್ಲಿಗೇರಿಸದಿರಲು ಸೂಚಿಸಿದೆ. ಹೀಗಾಗಿ ನೇಣಿಗೇರಿಸುವುದು ಮತ್ತಷ್ಟು ವಿಳಂಬವಾಗಲಿದೆ.

Please follow and like us:

Leave a Reply

Your email address will not be published. Required fields are marked *