ನವದೆಹಲಿ prajakiran.com : ದೇಶದೆಲ್ಲೆಡೆ ಕರೋನಾ ಲಾಕ್ ಡೌನ್ ನಿಂದಾಗಿ ಬಸ್, ರೈಲ್ವೇ ಹಾಗೂ ವಿಮಾನ ಪ್ರಯಾಣ ಸ್ಥಗಿತಗೊಳಿಸಿದ್ದ ಕೇಂದ್ರ ಸರಕಾರ ಇದೀಗ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದೆ.
ಹೀಗಾಗಿ ಈವರೆಗೆ ಸ್ಥಗಿತಗೊಂಡಿದ್ದ ರೈಲು ಸೇವೆ ಮೇ12ರಿಂದ ಆರಂಭವಾಗಲಿದೆ. ವಿಶೇಷ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಸೋಮವಾರದಿಂದ ರೈಲ್ವೇ ಆನ್ಲೈನ್ ಬುಕಿಂಗ್ ಶುರುವಾಗಿದೆ.
ಮೇ12 ರಿಂದ ದೆಹಲಿಯಿಂದ 15 ಸ್ಥಳಗಳಿಗೆ ರೈಲು ಸಂಚಾರಕ್ಕೆ ಸಮ್ಮತಿ ಸೂಚಿಸಿರುವುದರಿಂದ ದೆಹಲಿಯಿಂದ ಬೆಂಗಳೂರು, ಮುಂಬೈ, ಅಹಮದಾಬಾದ್, ತಿರುವನಂತಪುರ, ಚೆನ್ನೈ , ಅಗರ್ತಾಲಾ, ಪಾಟ್ನಾ, ಭುವನೇಶ್ವರ್, ಕೊಚ್ಚಿ, ಸೇರಿ ಹಲವು ಸ್ಥಳಗಳಿಗೆ ರೈಲು ಸೇವೆ ಪ್ರಾರಂಭವಾಗಲಿದೆ ಎಂದು ತಿಳಿಸಿದೆ.
ಆನ್ ಲೈನ್ ನಲ್ಲಿ ಮಾತ್ರ ಟಿಕೆಟ್ ಬುಕ್ಕಿಂಗ್ ಗೆ ಅವಕಾಶ ನೀಡಲಾಗಿದ್ದು,ಸೋಮವಾರ ಸಂಜೆ 4 ಗಂಟೆಯಿಂದ ಟಿಕೆಟ್ ಬುಕ್ಕಿಂಗ್ ಪ್ರಾರಂಭವಾಗಲಿದೆ.
ಮೇ 12 ರಿಂದ ಹದಿನೈದು ವಿಶೇಷ ರೈಲುಗಳ ಸಂಚಾರ ಪ್ರಾರಂಭವಾಗಲಿದ್ದು, ದೃಢೀಕರಿಸಿದ ಮತ್ತು ಮಾನ್ಯ ಟಿಕೆಟ್ಗಳನ್ನು ಹೊಂದಿರುವ ಪ್ರಯಾಣಿಕರಿಗೆ ಮಾತ್ರ ದೆಹಲಿ ನಿಲ್ದಾಣಕ್ಕೆ ಪ್ರವೇಶಿಸಲು ಅವಕಾಶವಿದೆ.
ನಿರ್ಗಮನದ ಸಮಯದಲ್ಲಿ ಸ್ಕ್ರೀನಿಂಗ್ ಅಡಿಯಲ್ಲಿ ಕರೋನಾ ರೋಗಲಕ್ಷಣಗಳಿಲ್ಲದವರಿಗೆ ಮಾತ್ರ ಪ್ರಯಾಣಿಸಲು ಅನುಮತಿ ನೀಡಲಾಗುವುದು. ಇನ್ನೊಂದು ವಿಶೇಷವೆಂದರೆ ಐಆರ್ಸಿಟಿಸಿ ವೆಬ್ಸೈಟ್ನಲ್ಲಿ ಮಾತ್ರ ಬುಕಿಂಗ್ ಲಭ್ಯವಿದೆ.
ಈ ಹಿಂದೆ ಎರಡು ಬಾರಿ ರೈಲ್ವೇ ಟಿಕೇಟ್ ಬುಕ್ಕಿಂಗ್ ಅವಕಾಶ ಕಲ್ಪಿಸಲಾಗಿತ್ತು. ಆನಂತರ ಪರವಾನಿಗೆ ಸಿಗದ ಹಿನ್ನಲೆಯಲ್ಲಿ ಕೋಟ್ಯಾಂತರ ರೂಪಾಯಿ ಹಣವನ್ನು ಪ್ರಯಾಣಿಕರಿಗೆ ಹಿಂತಿರುಗಿಸಲಾಗಿತ್ತು. ಈ ಬಾರಿ ಏನಾಗುತ್ತದೆ ಎಂಬ ಆತಂಕದಲ್ಲಿಯೇ ಜನ ಟಿಕೇಟ್ ಬುಕ್ಕಿಂಗ್ ಮಾಡುವಅನಿವಾರ್ಯತೆ ಎದುರಾಗಿದೆ.