ಚಿತ್ರದುರ್ಗ prajakiran.com : ರಾಜ್ಯದಲ್ಲಿ ಕರೋನಾ ರಣಕೇಕೆ ಹಾಕುತ್ತಿದ್ದು, ಸಭೆ, ಸಮಾರಂಭ, ಮೆರವಣಿಗೆ ಸೇರಿದಂತೆ ಯಾವುದೇ ಕಾರ್ಯಕ್ರಮಕ್ಕೆ ಆಸ್ಪದವಿಲ್ಲ ಎಂಬ ರಾಜ್ಯ ಸರಕಾರದ ಆದೇಶವನ್ನು ಸ್ವತಃ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರೇ ಉಲ್ಲಂಘಿಸಿದ್ದಾರೆ.
ಅವರು ಚಿತ್ರದುರ್ಗದ ಪರಶುರಾಮಪುರದಲ್ಲಿ ವೇದಾವತಿ ನದಿಗೆ ಬಾಗಿನಅರ್ಪಣೆ ವೇಳೆ ಅವರಅಭಿಮಾನಿಗಳು ಬೃಹತ್ ರೋಡ್ ಶೋ ಮೂಲಕ ಅದ್ದೂರಿ ಸ್ವಾಗತ ಕೋರಿ, ಬೃಹತ್ ಸೇಬಿನ ಹಾರ ಹಾಕಿ, ಹೂವಿನ ಸುರಿಮಳೆ ಹರಿಸಿರುವ ವೀಡಿಯೋ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದೆ.
ಆರೋಗ್ಯ ಇಲಾಖೆಯ ನಿಯಾಮಾವಳಿಗಳನ್ನೇ ಗಾಳಿಗೆ ತೂರಿದ ಆರೋಗ್ಯ ಸಚಿವ ಶ್ರೀರಾಮುಲು ಅಭಿಮಾನಿಗಳಿಂದ ಸೇಬಿನ ಹಾರ ಹಾಕಿಸಿಕೊಂಡು ಮೆರವಣಿಗೆ ಮಾಡಿಸಿಕೊಂಡಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದ ಆರೋಗ್ಯ ಸಚಿವರಿಂದಲೇ ಲಾಕ್ ಡೌನ್ ಉಲ್ಲಂಘನೆಯಾಗಿರುವುದು ನಾಚಿಕೆಗೇಡಿನ ಸಂಗತಿಯೆಂದು ಜನಸಾಮಾನ್ಯರು, ಮಹಿಳೆಯರು ಸಾಮಾಜಿಕ ಜಾಲತಾಣಗಳ ಮೂಲಕಕಿಡಿ ಕಾರುತ್ತಿದ್ದಾರೆ.
ನೂರು ನೂರೈವತ್ತು ಜನ ಸೇರುವ ಪದಗ್ರಹಣ ಕಾರ್ಯಕ್ರಮಕ್ಕೆ ಅನುಮತಿ ಇಲ್ಲ. ಆದರೆ ರಾಜ್ಯದ ಆರೋಗ್ಯ ಮಂತ್ರಿ ಈ ರೀತಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ , ಮಾಸ್ಕ್ ಇಲ್ಲದೆ ಇಷ್ಟು ದೊಡ್ಡ ಮಟ್ಟದಲ್ಲಿ ಮೆರವಣಿಗೆ ನಡೆಸೋದು ನ್ಯಾಯವೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಆರೋಗ್ಯ ಸಚಿವ ಬಿ.ಶ್ರೀರಾಮುಲು ಹಾಗೂ ಬಿ.ಎಸ್ ಯಡಿಯೂರಪ್ಪ ನವರೇ ಉತ್ತರ ಕೊಡಿ. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ದಿಟ್ಟ ಹೋರಾಟದ ಜೊತೆಗೆ ಪ್ರತಿಭಟನೆಯ ಬಿಸಿ ತೋರಿಸಬೇಕಾಗುತ್ತೆ ಎಂದು ಎಚ್ಚರಿಸಿದ್ದಾರೆ.
ನಾಡಿನ ಜನಸಾಮಾನ್ಯರ ಹಿತದೃಷ್ಟಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವಲ್ಲಿ ಸಚಿವ ಶ್ರೀರಾಮುಲು ವಿಫಲರಾಗಿದ್ದಾರೆ.
ಇಂತಹ ಸಾಮಾನ್ಯ ಜ್ಞಾನವಿಲ್ಲದ ಆರೋಗ್ಯ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಯುವ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಪೋಲೀಸ್ ಇಲಾಖೆ ಅವರನ್ನು ಬಂಧಿಸಿದೆ. ಹೀಗಾಗಿ ಅವರ ವಿರುದ್ದ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಿ ಎಂದು ಆಕ್ರೋಶವ್ಯಕ್ತಪಡಿಸಿದೆ.
ರಾಜ್ಯಕ್ಕೆ ಕೆಟ್ಟ ಸಂದೇಶ ಕೊಟ್ಟ ನಿಮಗೆ ಧಿಕ್ಕಾರ, ಕರೋನಾ ವೈರಸ್ ಹರಡುವುದರಲ್ಲಿ ನಿಮ್ಮ ಪಾತ್ರ ಮುಖ್ಯವಾಗಿ ಕಾಣ್ತಿದೆ ಎಂದು ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಘೋಷಣೆ ಕೂಗಿ ಆರೋಪಿಸಿದ್ದಾರೆ.