ಹುಬ್ಬಳ್ಳಿ : ಆಧುನಿಕ ಜಗತ್ತಿನ ಒತ್ತಡದ ಜೀವನದಲ್ಲಿ ಕುಟುಂಬ ಹಾಗೂ ಹಿರಿಯರೊಂದಿಗೆ ಬೆರೆಯಲು ಸಮಯ ಮೀಸಲಿಟ್ಟು ಅವರನ್ನು ಪ್ರೀತಿ, ವಾತ್ಸಲ್ಯದಿಂದ ಕಾಣಬೇಕು ಎಂದು ಪ್ರಧಾನ ಕೌಟುಂಬಿಕ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶರಾದ ಸುಮಂಗಲಾ ಎಸ್. ಬಸವಣ್ಣೂರು ಹೇಳಿದರು.
ಅವರು ತಾಲೂಕು ಕಾನೂನು ಸೇವಾ ಸಮಿತಿ, ಅಭಿಯೋಜನಾ ಇಲಾಖೆ, ವಕೀಲರ ಸಂಘ, ರಾಜ್ಯ ನಿವೃತ್ತ ಸರಕಾರಿ ನೌಕರರು ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ವಕೀಲರ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಯಸ್ಸಾದ ಹಿರಿಯರಿಗೆ ಒಂಟಿತನ, ನಿರ್ಲಕ್ಷ್ಯ, ಖಿನ್ನತೆ ಬರದ ಹಾಗೆ ಪ್ರೀತಿ, ವಿಶ್ವಾಸ, ಹಾಗೂ ವಾತ್ಸಲ್ಯದಿಂದ ನೋಡಿಕೊಳ್ಳಬೇಕು. ವೃದ್ಧಾಪ್ಯ ಶಾಪವಲ್ಲ ವರ ಎನಿಸಬೇಕು. ಭಾರತೀಯ ಸಂಸ್ಕøತಿಯಲ್ಲಿ ಹಿರಿಯರಿಗೆ ಮಹತ್ವದ ಸ್ಥಾನವಿದೆ. ಇಂದಿಗೂ ನಾವು ದಿನನಿತ್ಯದ ಜೀವನದಲ್ಲಿ ಹಿರಿಯ ಮಾರ್ಗದರ್ಶನ ಹಾಗೂ ಸಲಹೆಗಳನ್ನು ಪಡೆಯುತ್ತೇವೆ. ಆದರೆ ಪಾಶ್ಚಿಮಾತ್ಯ ಸಂಸ್ಕøತಿ ಹಾಗೂ ಅವಿಭಕ್ತ ಕುಟುಂಬಗಳು ನಾಶವಾಗಿ ಹಿರಿಯರಿಗೆ ಆಶ್ರಯವಿಲ್ಲದಂತಾಗಿದೆ ಎಂದರು.
ಸರ್ಕಾರ ಜಿಲ್ಲಾ ಮಟ್ಟದಲ್ಲಿ ಹಿರಿಯರಿಗಾಗಿ ವೃದ್ಧಾಪ್ಯ ಕೇಂದ್ರಗಳನ್ನು ಸ್ಥಾಪಿಸುತ್ತಿದೆ. ವಿಶ್ವ ಸಂಸ್ಥೆಯು ಹಿರಿಯ ನಾಗರಿಕರ ಸಮಸ್ಯೆಗಳನ್ನು ಹೋಗಲಾಡಿಸಲು ಹಾಗೂ ಈ ಸಂಬಂದ ಜಾಗೃತಿ ತರುವ ಸಲುವಾಗಿ 1990ರಿಂದ ಹಿರಿಯ ನಾಗರಿಕರ ದಿನಾಚರಣೆಯನ್ನು ಆಚರಣೆಗೆ ತಂದಿದೆ. ಭಾರತದಲ್ಲಿ ನಿತ್ಯವೂ ಹಿರಿಯರನ್ನು ಗೌರವ, ಆದರಗಳಿಂದ ನೋಡುವ ಸಂಸ್ಕøತಿ ಬೆಳದು ಬಂದಿದೆ. ಹಾಗಾಗಿ ಕೇವಲ ಒಂದು ದಿನಕ್ಕೆ ಹಿರಿಯ ನಾಗರಿಕ ದಿನಾಚರಣೆ ಸೀಮಿತಗೊಳಿಸವುದು ವೈರುಧ್ಯವಾಗಿ ಕಾಣುತ್ತದೆ ಎಂದು ಹೇಳಿದುರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಹಿರಿಯ ವಕೀಲರುಗಳಾದ ಆರ್.ಜಿ.ಕೊಡ್ಲಿ, ಜಿ.ಆರ್. ಅಂದಾನಿಮಠ, ಬಿ.ಡಿ.ಹೆಗಡೆ, ಎಮ್.ಎಮ್.ಮುಲ್ಲಾ, ಪಿ.ಎ.ಚವ್ಹಾಣ, ರಾಜ್ಯ ನಿವೃತ್ತ ಸರಕಾರಿ ನೌಕರರು ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಎ.ಪಾಟೀಲ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ವೆಂಕಟೇಶ್ ಆರ್. ಹುಲ್ಗಿ, ಒಂದನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಕೆ.ಎನ್.ಗಂಗಾಧರ, ಸಹಾಯಕ ಸರ್ಕಾರಿ ಅಭಿಯೋಜಕರಾದ ಪ್ರಕಾಶ ಸುಂಕದ, ವಕೀಲರ ಸಂಘದ ಅಧ್ಯಕ್ಷ ಅಶೋಕ ಬಳಿಗಾರ, ಉಪಾಧ್ಯಕ್ಷರಾದ ಎಸ್.ವಿ.ಕೊಪ್ಪರ, ಪ್ರಧಾನ ಕಾರ್ಯದರ್ಶಿ ಗುರುಹಿರೇಮಠ, ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿಗಳಾದ ಮಾದೇಶ.ವಿ, ಸೇರಿಂದತೆ ಹುಬ್ಬಳ್ಳಿ ನ್ಯಾಯಾಲಯದ ಎಲ್ಲಾ ಹಿರಿಯ ಹಾಗೂ ಕಿರಿಯ ಶ್ರೇಣಿ ನ್ಯಾಯಾಧೀಶರು, ವಕೀಲರ ಸಂಘದ ಸದಸ್ಯರು ಉಪಸ್ಥಿತರಿದ್ದರು.