ಉಡುಪಿ : ಗಂಡ ಸತ್ತು ಇಷ್ಟು ದಿನಗಳ ನಂತರ ರಾಜಕೀಯಕ್ಕೆ ಬರಬೇಕು ಎಂಬ ಯಾವ ನಿಯಮವೂ ಇಲ್ಲ. ಇದು ಮಹಿಳೆಯರಿಗೆ ಮಾಡಿದ ಅಪಮಾನ ಎಂದು ಹಿರಿಯ ನಟಿ ಸುಮಲತಾ ಅಂಬರೀಶ್ ಪರ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಬ್ಯಾಟಿಂಗ್ ಮಾಡಿದ್ದಾರೆ.
ಅವರು ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಇದು ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಮಹಿಳೆಯರಿಗೆ ಮಾಡಿದ ಅಪಮಾನವಾಗಿದೆ. ಹೀಗಾಗಿ ಅವರು ಸುಮಲತಾ ಅವರ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಅಂಬರೀಶ್ ಅವರ ಬಾಳಿಗೆ ಬಂದ ಸುಮಲತಾ ಮಂಡ್ಯದ ಮನೆ ಮಗಳು. ಮೂರು ನಾಲ್ಕು ದಶಕಗಳಿಂದ ರಾಜ್ಯದಲ್ಲಿದ್ದಾರೆ. ಮೊದಲೇ ಅಂಬರೀಶ್ ಅವರನ್ನು ಕಳೆದುಕೊಂಡ ನೋವಿನಲ್ಲಿದ್ದಾರೆ. ಅಂತಹವರಿಗೆ ಹೀಗೆ ಹೀಯಾಳಿಸುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನೂ ಕೋಟಾ ಶ್ರೀನಿವಾಸ ಪೂಜಾರಿ ಕೂಡ ಸುಮಲತಾ ಅಂಬರೀಶ್ ಪರ ಬ್ಯಾಟಿಂಗ್ ಮಾಡಿದ್ದು, ಕರ್ನಾಟಕದ ಸುಪರ್ ಸಿಎಂ ಹೆಚ್.ಡಿ.ರೇವಣ್ಣ ಮಹಿಳಾ ದಿನಾಚರಣೆಯಂದು ತನ್ನ ಅಕ್ಕ ತಂಗಿಯಾದ ಸುಮಲತಾ ಅವರನ್ನು ಹೀಗೆ ಮಾತನಾಡಬಾರದು. ಅವರಿಂದ ನಾವು ಇಂತಹ ಕೀಳು ಹೇಳಿಕೆ ನಿರೀಕ್ಷಿಸಿರಲಿಲ್ಲ. ಅವರು ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.