ರಾಜ್ಯ

ಶಾಸಕ ಯತ್ನಾಳ ಪರ ಬ್ಯಾಟಿಂಗ್ ಬೀಸಿದ ಶ್ರೀಶೈಲ ಜಗದ್ಗುರುಗಳು

ಬೆಂಗಳೂರು PRAJAKIRAN.COM : ವಿಜಯಪುರ ನಗರ ಬಿಜೆಪಿ ಶಾಸಕ ಹಾಗೂ ಫೈರ್ ಬ್ರಾಂಡ್ ನಾಯಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಶೋಕಾಸ್ ನೋಟಿಸ್ ನೀಡಿರುವುದಕ್ಕೆ ಬೇಸರ ವ್ಯಕ್ತಪಡಿಸಿ, ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಶ್ರೀಶೈಲ ಜಗದ್ಗುರು ಚನ್ನಸಿದ್ದರಾಮ ಶಿವಾಚಾರ್ಯರು ಪತ್ರ ಬರೆದಿದ್ದಾರೆ.

ಇಡೀ ಕರ್ನಾಟಕದ ಪರ ಯತ್ನಾಳ ಧ್ವನಿಯೆತ್ತಿದ್ದಾರೆ. ಅವರಿಗೆ ನೋಟಿಸ್ ನೀಡಿರುವುದರಿಂದ ಅವರಿಗೆ ನಷ್ಟವಿಲ್ಲ. ಅದು ಬಿಜೆಪಿಗೆ ನಷ್ಟ ಎಂದು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಅವರಿಗೆ ನೀಡಿರುವ ಶೋಕಾಸ್ ನೋಟಿಸ್ ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಕೋರಿದ್ದಾರೆ.

ಶಾಸಕ ಯತ್ನಾಳ ನೆರೆ ಸಂತ್ರಸ್ತ್ರರ ಪರವಾಗಿ ಧ್ವನಿಯೆತ್ತಿದ್ದಾರೆ. ಅವರು ನೇರ ನುಡಿಯ ಜನನಾಯಕನಾಗಿದ್ದು, ಅವರು ತಮ್ಮ ಮನಸ್ಸಿಗೆ ತೋಚಿದ್ದನ್ನು ಯಾವುದೇ ಸಂಕೋಚವಿಲ್ಲದೆ ನೇರವಾಗಿ ಹೇಳುತ್ತಾರೆ. ಅವರ ಆ ನೇರ ನುಡಿಯಿಂದಲೇ ಜನಮಾನಸ ಗೆದ್ದಿದ್ದಾರೆ ಎಂದು ಅವರ ಪರ ಬ್ಯಾಟಿಂಗ್ ಬೀಸಿದ್ದಾರೆ.

ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪರ ಶ್ರೀಶೈಲ ಜಗದ್ಗುರು ಚೆನ್ನಸಿದ್ದರಾಮ ಶಿವಾಚಾರ್ಯರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವುದು ರಾಜ್ಯ ಬಿಜೆಪಿಯಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದೆ. ಇದಕ್ಕೆ ಪ್ರಧಾನಿ ಮೋದಿಯವರು ಯಾವ ರೀತಿ ಸ್ಪಂದಿಸುತ್ತಾರೆ. ಅವರಿಗೆ ಶಿಸ್ತು ಸಮಿತಿ ಅಧ್ಯಕ್ಷರು ನೀಡಿರುವ ಶೋಕಾಸ್ ನೋಟಿಸ್ ವಾಪಾಸ್ಸು ಪಡೆಯುತ್ತಾರೆಯೇ ಅಥವಾ ಇಲ್ಲವೇ ಎಂಬುದು ತೀವ್ರ ಕೂತುಹಲ ಕೆರಳಿಸಿದೆ.

ಅಲ್ಲದೆ, ಬಸನಗೌಡ ಪಾಟೀಲ ಯತ್ನಾಳ ಅವರು ಕೂಡ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ತಮಗೆ ಭೇಟಿಗೆ ಸಮಯಾವಕಾಶ ನೀಡಬೇಕು. ನಾನು ನಿಮ್ಮೊಂದಿಗೆ ಮಾತನಾಡುವುದಿದೆ ಎಂದು ಹೇಳಿದ್ದರು. ಅಲ್ಲದೆ, ಶಿಸ್ತು ಸಮಿತಿ ನೋಟಿಸ್ ಗೆ ಯಾವುದೇ ಉತ್ತರ ನೀಡುವುದಿಲ್ಲ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

Please follow and like us:

Leave a Reply

Your email address will not be published. Required fields are marked *