ರಾಜ್ಯ

ಬಾಳು ನೀಡುವಂತೆ ಗಂಡನ ಮನೆ ಎದುರೆ ಯುವತಿ ಪ್ರತಿಭಟನೆ

ಕೊಪ್ಪಳ (PRAJAKIRAN.COM) : ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ ಯುವಕನ ಮನೆ ಎದುರು ಯುವತಿ ಧರಣಿ ನಡೆಸಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆ ಕುಕನೂರಿನ ಬಾಣಾಪುರದಲ್ಲಿರುವ ಯುವಕ ವಸಂತ ಹುಬ್ಬಳ್ಳಿಯಲ್ಲಿ ಪ್ಯಾರಾ ಮೆಡಿಕಲ್ ಓದುತ್ತಿರುವ ಶಕುಂತಲಾ ಜೊತೆಗೆ ಕಳೆದ 8 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.

ಮದುವೆ ಭರವಸೆ ನೀಡಿದ್ದ ವಸಂತ ನಂತರ ಮನೆಯವರ ಒತ್ತಾಯಕ್ಕೆ ಮಣಿದು ಆಕೆಯಿಂದ ದೂರವಾಗಲು ಯತ್ನಿಸಿದ್ದಾನೆ. ಆದರೆ, ಪಟ್ಟು ಬಿಡದೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ಯುವತಿ ಪೊಲೀಸ್ ಅಧಿಕಾರಿಗಳ ಸಹಾಯದಿಂದ ಆತನನ್ನು ಮದುವೆಯಾಗಿದ್ದಳು.

ಆದರೆ, ಇದೀಗ ಈ ಮದುವೆ ನೋಂದಣಿ ಮಾಡಿಸಲು ಯುವಕ ಮತ್ತೆ ಕ್ಯಾತೆ ತೆಗೆದಿದ್ದಾನೆ. ಅಲ್ಲದೆ, ಆಕೆ ಜೊತೆಗೆ ಬದುಕುವುದಕ್ಕೂ ಹಿಂದೇಟು ಹಾಕುತ್ತಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.

ಇದರಿಂದ ನೊಂದು ಯುವಕನ ಮನೆಯ ಎದುರು ಪ್ರತಿಭಟನೆ ನಡೆಸುತ್ತಿರುವ ಯುವತಿ ಶಕುಂತಲಾ ಕಳೆದ ಎರಡು ತಿಂಗಳಿನಲ್ಲಿ ಮೂರನೇ ಬಾರಿ ಪ್ರತಿಭಟನೆ ನಡೆಸುತ್ತಿದ್ದಾಳೆ.

ಆದರೆ, ಈಕೆ ಪ್ರತಿಭಟನೆಗೆ ಯುವಕ ವಸಂತ ಹಾಗೂ ಆತನ ಕುಟುಂಬದವರು ಕ್ಯಾರೆ ಎನ್ನುತ್ತಿಲ್ಲ. ಅಲ್ಲದೆ, ಮನೆಗೆ ಬೀಗ ಹಾಕಿಕೊಂಡು ಅಲ್ಲಿಂದ ಕಾಲು ಕಿತ್ತಿದ್ದಾರೆ.

ಹುಡುಗನ ಮನೆ ಮುಂದೆ ಕುಳಿತಿರುವ ಯುವತಿ ತನ್ನ ಗಂಡ ವಸಂತ ಸ್ಥಳಕ್ಕೆ ಬರುವವರೆಗೆ ಜಾಗ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾಳೆ.

Please follow and like us:

Leave a Reply

Your email address will not be published. Required fields are marked *