ಧಾರವಾಡ : ಧಾರವಾಡದ ನಿರ್ಮಾಣ ಹಂತದ ಬಹು ಮಹಡಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸರು ಕಟ್ಟಡ ನಿರ್ಮಾಣದ ಆರೋಪಿ ಕಟ್ಟಡದ ವಿನ್ಯಾಸಗಾರ ವಿವೇಕ್ ಪವಾರ್ ಹಾಗೂ ಕಟ್ಟಡದ ಮಾಲೀಕರಾದ ರವಿ ಸಬರದ ಹಾಗೂ ಮಹಾಬಳೇಶ್ವರ ಪುರದಗುಡಿ ಅವರ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಹುಬ್ಬಳ್ಳಿ-ಧಾರವಾಡ ಡಿಸಿಪಿ ಡಿ.ಎಲ್. ನಾಗೇಶ್ ನೇತೃತ್ವದ ತಂಡ ಸೋಮವಾರದ ವರೆಗೆ ಅವರಿಗೆ ಕಟ್ಟಡ ಕುಸಿತದ ಕುರಿತು ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದಾರೆ ಎಂದು ಉನ್ನತ ಪೊಲೀಸ ಮೂಲಗಳು ಪ್ರಜಾಕಿರಣಕ್ಕೆ ತಿಳಿಸಿವೆ.
ನಿರ್ಮಾಣ ಹಂತದ ಕಟ್ಟಡ ಎಲ್ಲೆಲ್ಲಿ ಕುಸಿದಿತ್ತು. ಕಟ್ಟಡ ಏಕಾಏಕಿ ಕುಸಿಯಲು ಕಾರಣವೇನು. ಬಳಸಿದ ತಂತ್ರಜ್ಞಾನ ಯಾವುದು, ಬಳಕೆ ಮಾಡಲಾದ ಸಾಮಾಗ್ರಿಗಳ ಗುಣಮಟ್ಟ, ಕಟ್ಟಡ ಬಿರುಕು ಬಿಟ್ಟರೂ ಕಾಮಗಾರಿ ನಡೆಸಿದ್ದು ಯಾಕೆ ನಿರ್ಲಕ್ಷ್ಯ ತೋರಲು ಕಾರಣವೇನು, ಅಲ್ಲದೆ, ಮಾಲೀಕರೊಂದಿಗೆ ಮಾಡಿಕೊಂಡ ಕರಾರು ಸೇರಿದಂತೆ ಹೀಗೆ ಅನೇಕ ಪ್ರಶ್ನೇಗಳ ಸುರಿಮಳೆಯನ್ನೇ ಹರಿಸಿ, ಬಾಯಿ ಬಿಡಿಸುವ ಕೆಲಸ ಮಾಡಿದ್ದಾರೆ.
ಆದರೆ ಕೆಲವುಗಳಿಗೆ ಉತ್ತರ ನೀಡಲು ವಿನ್ಯಾಸಗಾರ ವಿವೇಕ್ ಪವಾರ್ ಸಹಕಾರ ನೀಡುತ್ತಿಲ್ಲ. ಅಲ್ಲದೆ, ನ್ಯಾಯಾಲಯದಲ್ಲಿ ಪೊಲೀಸರ ವಿರುದ್ದವೇ ಹೇಳಿಕೆ ನೀಡಿದ್ದು, ಖಾಲಿ ಹಾಳೆಗಳ ಮೇಲೆ ಸಹಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಗಮನಕ್ಕೆ ತಂದಿದ್ದಾರೆ.
ಸೋಮವಾರ ಈ ಮೂವರು ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನಲೆಯಲ್ಲಿ ಅವರನ್ನು ಎರಡನೇ ಜೆ ಎಂಎಫ್ ನ್ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.
ನ್ಯಾಯಾಧೀಶರಾದ ವಿಜಯಲಕ್ಷ್ಮಿ ಗಾಣಾಪುರ ಅವರಿಗೆ ಆರೋಪಿಗಳಿಗೆ ಇನ್ನೂ ಒಂದು ವಾರ ಪೊಲೀಸ್ ವಶಕ್ಕೆ ನೀಡಲು ಮನವಿ ಮಾಡಿದರು. ಆದರೆ ನ್ಯಾಯಾಧೀಶರು ಮೂವರು ಆರೋಪಿಗಳಿಗೆ ಕೇವಲ ಎರಡು ದಿನ ಪೊಲೀಸ್ ಕಸ್ಟಡಿಗೆ ವಹಿಸಿ ಆದೇಶ ಹೊರಡಿಸಿದರು.
ಇನ್ನೂಳಿದಂತೆ ಇನ್ನಿಬ್ಬರು ಆರೋಪಿಗಳಾದ ಗಂಗಣ್ಣ ಶಿಂತ್ರೆ ಹಾಗೂ ಬಸವರಾಜ ಸಬರದ ಅವರು ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಅವರನ್ನು ಸೋಮವಾರ ನ್ಯಾಯಾಲಯಕ್ಕೆ ಕರೆದುಕೊಂಡು ಬರಲಿಲ್ಲ. ಅವರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ಪ್ರಜಾಕಿರಣಕ್ಕೆ ತಿಳಿಸಿದ್ದಾರೆ.
ಪೊಲೀಸರ ವಿಚಾರಣೆಯಿಂದ ಕಕ್ಕಾಬಿಕ್ಕಿಯಾಗಿರುವ ಕಟ್ಟಡ ವಿನ್ಯಾಸಗಾರ ವಿವೇಕ್ ಪವಾರ ಹಾಗೂ ಮಾಲೀಕರಾದ ರವಿ ಸಬರದ, ಮಹಾಬಳೇಶ್ವರ ಪುರದಗುಡಿ ಅವರು ಹಲವು ಪ್ರಶ್ನೇಗಳಿಗೆ ಉತ್ತರಿಸಿಲ್ಲ.
ಇನ್ನೂ ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿರುವ ಈ ಮೂವರು ಆರೋಪಿಗಳಾದ ಕಟ್ಟಡ ವಿನ್ಯಾಸಗಾರ ವಿವೇಕ್ ಪವಾರ ಹಾಗೂ ಮಾಲೀಕರಾದ ರವಿ ಸಬರದ, ಮಹಾಬಳೇಶ್ವರ ಪುರದಗುಡಿ ಅವರು ಪೊಲೀಸರ ತನಿಖೆಗೆ ಸಹಕಾರ ನೀಡುತ್ತಾರೆಯೇ ಇಲ್ಲವೇ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ಈ ಕುರಿತು ಪ್ರಜಾಕಿರಣದೊಂದಿಗೆ ಮಾತನಾಡಿದ ಕಟ್ಟಡದ ಮಾಲೀಕರ ರವಿ ಸಬರದ, ನಮ್ಮ ಕಟ್ಟಡದಲ್ಲಿ ಸಾವು ನೋವು ಸಂಭವಿಸಿರುವುದು ಮನಸ್ಸಿಗೆ ಆಘಾತವುಂಟು ಮಾಡಿದೆ. ನಾವು ವಿನ್ಯಾಸಗಾರ ವಿವೇಕ್ ಪವಾರ್ ಹೇಳಿದಂತೆ ಕೇಳಿದ್ದೇವೆ. ನಾವು ತಾಂತ್ರಿಕ ಪರಿಣಿತರಲ್ಲ. ಅವರ ಬಳಿ 35ಕ್ಕೂ ಹೆಚ್ಚು ಜನರ ತಂಡವಿದೆ. ಅವರಿಗೆ ನಾವು ಕೇವಲ ಹಣ ಪಾವತಿಸಿದ್ದೇವೆ. ಇದರಲ್ಲಿ ನಮ್ಮದು ಎಳ್ಳಷ್ಟು ತಪ್ಪಿಲ್ಲ ಎಂದು ಅವಲತ್ತುಕೊಂಡರು.