ಧಾರವಾಡ : ಟಿಪ್ಪು ಜಯಂತಿ ವಿರೋಧಿಸಿ ಧಾರವಾಡದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿಯ 55ಕ್ಕೂ ಹೆಚ್ಚು ಮುಖಂಡರನ್ನು ಬಂಧಿಸಿ ಆನಂತರ ಬಿಡುಗಡೆಗೊಳಿಸಲಾಯಿತು.
ಧಾರವಾಡದ ಸುಭಾಸ ರಸ್ತೆಯಲ್ಲಿರುವ ಬಿಜೆಪಿ ಕಚೇರಿ ಎದುರು ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಟಿಪ್ಪು ಜಯಂತಿ ಆಚರಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ದ ಹಾಗೂ ಟಿಪ್ಪು ಸುಲ್ತಾನ್ ಅವರ ವಿರುದ್ದ ಕೂಡ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
೧೪೪ ಕಲಂ ಜಾರಿ ಹಿನ್ನೆಲೆ ಪ್ರತಿಭಟನೆಗೆ ಅವಕಾಶ ನಿರಾಕರಿಸಿದ ಪೋಲಿಸರೊಂದಿಗೆ ಮಾತಿನ ಚಕಮಕಿ ನಡೆಸಿ, ಪ್ರತಿಭಟನೆಗೆ ಮುಂದಾದರು. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಅವರನ್ನು ಬಂಧಿಸಿ ಠಾಣೆಗೆ ಕರೆದೊಯ್ದು ಆನಂತರ ಬಿಡುಗಡೆಗೊಳಿಸಿದರು.
ಈ ಪ್ರತಿಭಟನೆಯಲ್ಲಿ ಧಾರವಾಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಚೈತ್ರಾ ಶಿರೂರ, ಜಿಪಂ ಸದಸ್ಯ ನಾಗನಗೌಡ ಪಾಟೀಲ, ಮಹಾನಗರ ಪಾಲಿಕೆ ಸದಸ್ಯರಾ ಸಂಜಯ ಕಪಟಕರ್, ಶಂಕರ ಶೆಳಕೆ, ಮುಖಂಡರಾದ ಈರಳ್ಳಿ ಹಪ್ಪಳ್ಳಿ, ಶರಣು ಅಂಗಡಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.