ಧಾರವಾಡ PRAJAKIRAN.COM : ೬೬ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಧಾರವಾಡದ ಡಾ. ಮಲ್ಲಿಕಾರ್ಜುನ ಮನಸೂರ ಕಲಾಭವನದಲ್ಲಿ ದಿ.೧೭ ರಂದು ಬೆಳಿಗ್ಗೆ ೧೦ಕ್ಕೆ ಒಂದು ದಿನ ಚಿಂತನ-ಮಂಥನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಖಂಡ ಧಾರವಾಡ ಜಿಲ್ಲೆಯ ವ್ಯಾಪ್ತಿ ಹೊಂದಿರುವ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಬಾಪುಗೌಡ ಪಾಟೀಲ ತಿಳಿಸಿದರು.
ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕರ್ನಾಟಕ ರಾಜ್ಯ ಸಹಕಾರ ದರ್ಜಿಗಳ ಮಹಾಮಂಡಳ, ಕರ್ನಾಟಕ ರಾಜ್ಯ ಸಹಕಾರ ಚಲನಚಿತ್ರ ಹಾಗೂ ಲಲಿತಕಲಾ ಮಹಾಮಂಡಳ, ವಾಲ್ಮೀ, ಧಾರವಾಡ ಜಿಲ್ಲಾ ಸಹಕಾರ ಯೂನಿಯನ್, ಕೆಸಿಸಿ ಬ್ಯಾಂಕ್, ಸಹಕಾರ ಹಾಲು ಒಕ್ಕೂಟ, ಕೆ.ಓ.ಎಫ್, ಹುಬ್ಬಳ್ಳಿ, ಇಪ್ಕೋ, ಸಹಕಾರ ಇಲಾಖೆ ಹಾಗೂ ಇನ್ನಿತರ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಸಹಕಾರ ವಲಯವನ್ನು ಬಲಪಡಿಸವ ನಿಟ್ಟಿನಲ್ಲಿ ಅನೇಕ ಚಿಂತನ-ಮಂಥನಗಳು ನಡೆಯುತ್ತವೆ. ಈ ಕಾರ್ಯಕ್ರಮದ ಅಂಗವಾಗಿ ಸಹಕಾರ ಸಂಸ್ಥೆಗಳ ನಡುವೆ ಸಹಕಾರವನ್ನು ಬಲಪಡಿಸುವುದು ಎಂಬ ವಿಷಯ ಕುರಿತು ಒಂದು ದಿನದ ಕಾರ್ಯಕ್ರಮವನ್ನು ಧಾರವಾಡದಲ್ಲಿ ಆಯೋಜಿಸಲಾಗಿದೆ ಎಂದರು.
ಸಹಕಾರ ಖಾತೆಯೂ ಹೊಂದಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಶಾಸಕ ಎಚ್.ಕೆ. ಪಾಟೀಲ ಧ್ವಜಾರೋಹಣ ನೆರವೇರಿಸುವರು. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅಧ್ಯಕ್ಷತೆ ವಹಿಸುವರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸಹಕಾರಿ ಪಿತಾಮಹರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಮಾಡುವರು. ಸಚಿವ ಸಿ.ಸಿ. ಪಾಟೀಲ ಸಹಕಾರಿ ಪತ್ರಿಕೆ ಬಿಡುಗಡೆ ಮಾಡಲಿದ್ದು, ಮಾಜಿ ಸಚಿವ ವಿನಯ ಕುಲಕರ್ಣಿ ಹಿರಿಯ ಸಹಕಾರಿಗಳನ್ನು ಸನ್ಮಾನಿಸುವರು. ನಂತರ ಉತ್ತಮ ಸಹಕಾರಿ ಸಂಘಗಳನ್ನು ಜಿಲ್ಲೆಯ ಜನಪ್ರತಿನಿಧಿಗಳು ಸನ್ಮಾನಿಸುವರು’ ಎಂದು ಹೇಳಿದರು.
ಕಳೆದ ಎರಡು ದಶಕಗಳಿಗಿಂತ ಹೆಚ್ಚು ಕಾಲ ಸುಸ್ತಿಯಾಗಿದ್ದ ದೊಡ್ಡ ಸಾಲಗಳನ್ನು ಸರಕಾರದ ಅನುಮತಿ ಮೇರೆಗೆ ಏಕ ಕಾಲಿಕ ತಿರುವಳಿ ರೂಪದಲ್ಲಿ ೨೩ ಕೋಟಿ ವಸೂಲು ಮಾಡಲಾಗಿದೆ. ಇನ್ನು ಅಂದಾಜು ೧೦ ಕೋಟಿ ಕೃಷಿಯೇತರ ಉದ್ದೇಶಕ್ಕೆ ನೀಡಿದ್ದ ಸಾಲ ವಸೂಲಾತಿಗೆ ಆಡಳಿತ ಮಂಡಳಿ ಮುಂದಾಗಿದೆ’ ಎಂದು ವಿವರಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಅಧ್ಯಕ್ಷ ಜಿ.ಪಿ. ಪಾಟೀಲ, ನಿರ್ದೇಶಕ ಆರ್.ಕೆ. ಪಾಟೀಲ, ಬ್ಯಾಂಕ್ ಉಪಾಧ್ಯಕ್ಷ ಎಸ್.ವೈ. ಪಾಟೀಲ, ಸಹಕಾರ ಸಂಘಗಳ ಹೆಚ್ಚುವರಿ ನಿಬಂಧಕ ಆರ್. ಶಿವಪ್ರಕಾಶ, ಸಹಕಾರ ಸಂಘಗಳ ಸಂಯುಕ್ತ ನಿಬಂಧಕ ಜಿ.ಎಂ. ಪಾಟೀಲ, ಕೆಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮುನಿಯಪ್ಪ ಉಪಸ್ಥಿತರಿದ್ದರು.