ತುಮಕೂರು : ಮೊಮ್ಮಗ ಪ್ರಜ್ವಲ್ ರೇವಣ್ಣನಿಗಾಗಿ ಕಳೆದ ಅರವತ್ತು ವರ್ಷಗಳಿಂದ ರಾಜಕೀಯವಾಗಿ ಪ್ರತಿನಿಧಿಸುತ್ತಿದ್ದ ಹಾಸನ ಲೋಕಸಭಾ ಕ್ಷೇತ್ರವನ್ನು ತ್ಯಾಗ ಮಾಡಿದ್ದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ತುಮಕೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಧುಮುಕಿದ್ದಾರೆ.
ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಸಮ್ಮುಖದಲ್ಲಿ ಬೃಹತ್ ಶಕ್ತಿ ಪ್ರದರ್ಶನ ನಡೆಸಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ನಾಮಪತ್ರ ಸಲ್ಲಿಸಿದರು.
ಇದೇ ವೇಳೆ ಕಾಂಗ್ರೆಸ್ ಹಾಲಿ ಸಂಸದ ಮುದ್ದುಹನುಮೇಗೌಡರಿಗೆ ಪಕ್ಷದ ಟಿಕೇಟ್ ತಪ್ಪಿದ್ದರಿಂದ ಅವರು ಬಂಡಾಯ ಅಭ್ಯರ್ಥೀಯಾಗಿ ಕಣಕ್ಕೆ ಧುಮುಕಿದ್ದಾರೆ.
ಹೀಗಾಗಿ ತುಮಕೂರು ಕ್ಷೇತ್ರ ಕೂಡ ರಾಜ್ಯ ರಾಜಕಾರಣದ ಗಮನ ಸೆಳೆದಿದೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಬೆಂಗಳೂರು ಉತ್ತರದಿಂದ ಸ್ಪರ್ಧಿಸಬೇಕಾ ಅಥವಾ ತುಮಕೂರಾ ಎಂಬುದು ಚರ್ಚೆಗೆ ಗ್ರಾಸವಾಗಿತ್ತು.
ಕೊನೆಗೆ ದೊಡ್ಡ ಗೌಡರು ತುಮಕೂರು ಆಯ್ದುಕೊಂಡಿರುವುದು ಕಾಂಗ್ರೆಸ್ ಜೆಡಿಎಸ್ ನಡುವೆ ಬಂಡಾಯದ ಬೇಗುದಿ ಹೆಚ್ಚಿಸಿದೆ. ಕಾಂಗ್ರೆಸ್ ಮಾಜಿ ಶಾಸಕರಾದ ಕೆ.ಎನ್. ರಾಜಣ್ಣ ಸೇರಿದಂತೆ ಅನೇಕರು ಬಂಡಾಯದ ಸುಳಿವು ನೀಡಿದ್ದರು.
ಅದಕ್ಕೆ ತೇಪೆ ಹಾಕುವಲ್ಲಿ ಯಶಸ್ವಿಯಾಗುತ್ತಾರಾ ಅಥವಾ ಇಲ್ಲವೇ ಎಂಬುದು ಕಾದು ನೋಡಬೇಕಿದೆ.